ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಉಪನ್ಯಾಸಕರ ಪ್ರತಿಭಟನೆ: ವಿದ್ಯಾರ್ಥಿಗಳು ಅತಂತ್ರ

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ನಡೆಯದ ತರಗತಿ
Published 6 ಡಿಸೆಂಬರ್ 2023, 5:35 IST
Last Updated 6 ಡಿಸೆಂಬರ್ 2023, 5:35 IST
ಅಕ್ಷರ ಗಾತ್ರ

ಕೊಪ್ಪಳ: ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿ ರಾಜ್ಯದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು ಪಾಠ ಮಾಡುವುದನ್ನು ನಿಲ್ಲಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ.

ರಾಜ್ಯದಲ್ಲಿ ಒಟ್ಟು 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿದ್ದು, 260 ಅರೆಕಾಲಿಕ ಉಪನ್ಯಾಸಕರು ಇದ್ದಾರೆ. ವಿವಿಧ ವಿಭಾಗಗಳಲ್ಲಿ 900ರಿಂದ 1,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬಿತವಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಕುಕನೂರು ತಾಲ್ಲೂಕಿನ ತಳಕಲ್‌ ಹಾಗೂ ಗಂಗಾವತಿಯಲ್ಲಿ ತಲಾ ಒಂದು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿದ್ದು, 63 ಅತಿಥಿ ಉಪನ್ಯಾಸಕರಿದ್ದಾರೆ.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ಬಗ್ಗೆ ಅಧ್ಯಯನ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ 2021ರ ಡಿ. 15ರಂದು ಕಾನೂನು ಇಲಾಖೆ, ಆರ್ಥಿಕ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ವರದಿಯ ಬಳಿಕ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೋಧನಾ ಅವಧಿ ಮತ್ತು ವೇತನ ಹೆಚ್ಚಿಸಲಾಗಿದೆ. ಆದರೆ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅರೆಕಾಲಿಕ ಉಪನ್ಯಾಸಕರಿಗೆ ಈ ಭಾಗ್ಯ ಸಿಗಲಿಲ್ಲ.

ಹೀಗಾಗಿ ಈಗ ತರಗತಿಗಳಿಗೆ ಬಹಿಷ್ಕಾರ ಹಾಕಿ ಏಳು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಉಪನ್ಯಾಸಕರ ನಡುವಿನ ಹೋರಾಟದಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಮುಂಬರುವ ಜನವರಿ 6ರ ಒಳಗೆ ಒಂದು ಮತ್ತು ಏಳನೇ ಸೆಮಿಸ್ಟೆರ್‌ಗಳ ಕೆಲಸದ ಅವಧಿ ಪೂರ್ಣಗೊಳ್ಳುತ್ತದೆ. ಅಷ್ಟರೊಳಗೆ ವಿದ್ಯಾರ್ಥಿಗಳು ಎರಡು ಆಂತರಿಕ ಲ್ಯಾಬ್‌ ಕೆಲಸ ಮುಗಿಸಬೇಕಿದೆ. 3 ಹಾಗೂ 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ತರಗತಿ ಆರಂಭವಾಗಿ ಹತ್ತು ದಿನಗಳಷ್ಟೇ ಕಳೆದಿವೆ. ಇದೆಲ್ಲದರ ನಡುವೆ ಬಾಕಿಯಿರುವ ಪಠ್ಯ ಪೂರ್ಣಗೊಳ್ಳುವುದು ಯಾವಾಗ? ನಾವು ಪರೀಕ್ಷೆಗೆ ತಯಾರಿ ಹೇಗೆ ಮಾಡಿಕೊಳ್ಳಬೇಕು’ ಎಂದು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.

ಅರೆಕಾಲಿಕ ಉಪನ್ಯಾಸಕರ ಧರಣಿಯಿಂದಾಗಿ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಹೀಗಾದರೆ ನಮ್ಮ ಪಠ್ಯ ಮುಗಿಯುವುದು ಯಾವಾಗ?

-ದರ್ಶನ ಶಳಗಿ ತಳಕಲ್‌ ಎಂಜನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಕೊಪ್ಪಳ

ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ವೇತನದಂತೆ ನಮಗೂ ವೇತನ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ. ಮನುಕುಮಾರ ಜಿ.ಬಿ. ಅಧ್ಯಕ್ಷ ಅಖಿಲ ಕರ್ನಾಟಕ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ

ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿರುವ ಕಾರಣ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ. ಇರುವಷ್ಟು ಪೂರ್ಣ ಪ್ರಮಾಣದ ಸಿಬ್ಬಂದಿ ನೆರವಿನಿಂದ ಕಾಲೇಜು ನಿರ್ವಹಣೆ ಮಾಡುತ್ತಿದ್ದೇವೆ.

-ವಿರೂಪಾಕ್ಷಿ ಬಾಗೋಡಿ ಪ್ರಾಚಾರ್ಯರು ತಳಕಲ್‌ ಎಂಜಿನಿಯರಿಂಗ್‌ ಕಾಲೇಜು ಕೊಪ್ಪಳ

ಎರಡು ಕಾಲೇಜಿಗೆ ಪ್ರಾಚಾರ್ಯರೇ ಆಧಾರ!

ಗದಗ ಜಿಲ್ಲೆ ನರಗುಂದ ಮತ್ತು ಬೀದರ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರಾಚಾರ್ಯರು ಮಾತ್ರ ಕಾಯಂ ಸಿಬ್ಬಂದಿಯಾಗಿದ್ದು ಉಳಿದ ಎಲ್ಲರೂ ಅರೆಕಾಲಿಕ ಉಪನ್ಯಾಸಕರೇ ಕಾಲೇಜು ನಿರ್ವವಣೆ ಮಾಡುತ್ತಿದ್ದಾರೆ. ನರಗುಂದದಲ್ಲಿ 212 ವಿದ್ಯಾರ್ಥಿಗಳು ಇದ್ದು 14 ಅರೆಕಾಲಿಕ ಉಪನ್ಯಾಸಕರು ಇದ್ದಾರೆ. ಬೀದರ್‌ನಲ್ಲಿ 220 ವಿದ್ಯಾರ್ಥಿಗಳಿದ್ದು ಆರು ಜನ ‘ಅತಿಥಿ’ಗಳಿದ್ದಾರೆ. ಹೀಗಾಗಿ ಕಾಲೇಜಿನ ಸಂಪೂರ್ಣ ಭಾರ ಪ್ರಾಚಾರ್ಯರ ಮೇಲೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT