ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ‘ಲಾಕ್‌ಡೌನ್‌’ ಕಂಟಕ

ಎರಡು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಮಾವು ಬೆಳೆಗಾರರು
Last Updated 28 ಏಪ್ರಿಲ್ 2021, 5:21 IST
ಅಕ್ಷರ ಗಾತ್ರ

ಹನುಮಸಾಗರ: ಕಳೆದ ವರ್ಷ ಮಾವು ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ಬಾರಿ ಅಲ್ಪ ಪ್ರಮಾಣದ ಮಾವಿನ ಫಸಲು ಬಂದಿದೆ. ಆದರೂ ಮತ್ತೆ ಲಾಕ್‌ಡೌನ್‌ ಆ ಅಲ್ಪ ಸಂತಸವನ್ನೂ ಕಿತ್ತುಕೊಂಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಇಳುವರಿ ಕಡಿಮೆ ಇದೆ. ಆರಂಭದಲ್ಲಿ ಮರದ ತುಂಬ ಹೂವು ಹೊದ್ದಿದ್ದರೂ ಕ್ರಮೇಣ ಕಾಯಿ ಕಟ್ಟುವ ಹಂತದಲ್ಲಿ ಹೂವು, ಮಿಡಿ ಉದುರಿ ಬಿದ್ದ ಕಾರಣ ಶೇ 50ರಷ್ಟು ಇಳುವರಿ ಕುಂಠಿತವಾದಂತಾಗಿದೆ.

‘ಮಾವು ಈಗಾಗಲೇ ಮಾರುಕಟ್ಟೆಗೆ ಬರಬೇಕಾಗಿತ್ತು. ವಾತಾವರಣದಲ್ಲಿ ಕೊಂಚ ಏರುಪೇರಾಗಿರುವುದರಿಂದ ಕೊಯ್ಲು ಮುರ್ನಾಲ್ಕು ವಾರ ತಡವಾಗಿದೆ. ಕಾರಣ ಬಹುತೇಕ ಭಾಗದಲ್ಲಿ ಮುಂದಿನ ವಾರದಿಂದ ಮಾವು ಕೊಯ್ಲು ನಡೆಯುವ ಸಂಭವವಿದೆ’ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಕಳಕನಗೌಡ ಪಾಟೀಲ ತಿಳಿಸಿದರು.

‘ಈ ಬಾರಿ ಮಾವಿಗೆ 15 ರಿಂದ 20 ದಿನಗಳವರೆಗೆ ಸೀಸನ್ ಇರುತ್ತಿತ್ತು. ಈಗ ಲಾಕ್‌ಡೌನ್‌ ಅದನ್ನೂ ಕಿತ್ತುಕೊಂಡಿದೆ. ಸರ್ಕಾರ ಕೃಷಿ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಿದೆ. ಆದರೆ, ಸಾರಿಗೆ ವ್ಯವಸ್ಥೆಯೇ ಇಲ್ಲದೆ, ಮಾರಾಟ ಹೇಗೆ ಸಾಧ್ಯ?. ಮಾವು ಬೆಳೆಗಾರರಿಗೆ ಇದು ಸಂಕಷ್ಟದ ಕಾಲ’ ಎಂದು ಹನುಮಸಾಗರದ ಬಸವರಾಜ ಹಳ್ಳೂರ, ಕಡೆಕೊಪ್ಪ ಗ್ರಾಮದ ಮಾವು ಬೆಳೆಗಾರ ಸಂಗಪ್ಪ ಬದಾಮಿ
ತಿಳಿಸಿದರು.

ವಾತಾವರಣದಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಮರದಲ್ಲಿನ ಕಾಯಿಗಳು, ಎಲೆಗಳು ಉದುರಿವೆ. ಭಾರತೀಯ ತೋಟಗಾರಿಕೆ ಇಲಾಖೆ ಅಧಿಕ ಇಳುವರಿಗಾಗಿ ಬೆಳೆಗಾರರಿಗೆ ಪರಿಚಯಿಸಿದ್ದ ಅಧಿಕ ಪೋಷಕಾಂಶಗಳುಳ್ಳ ಮ್ಯಾಂಗೊ ಸ್ಪೆಷಲ್ ಪೌಡರನ್ನು ಅರಂಭದಲ್ಲಿಯೇ ರೈತರು ಮಾವಿನ ಎಲೆಗಳಿಗೆ ಸಿಂಪಡಿಸಿದ್ದಾರೆ. ಅದರಂತೆ ಫಲಿತಾಂಶವೂ ಸಿಕ್ಕಿತು, ಹೆಚ್ಚಿನ ಹೂವು ಬಿಟ್ಟಿತು, ಆದರೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಕಾಯಿಗಳು ಋತುಮಾನಕ್ಕೆ ಬರುವ ಮುನ್ನವೇ ಉದುರಿದವು ಎಂದು ರೈತರು ನೋವು
ತೋಡಿಕೊಳ್ಳುತ್ತಾರೆ.

‘ತಾಲ್ಲೂಕಿನಲ್ಲಿ 30 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ರೈತರು ಮಾವು ಬೆಳೆಯುತ್ತಿದ್ದು, ಅದರಲ್ಲಿ ಕೇಸರ, ಬೇನಿಸಾನ್, ದಶೇರಿ, ರತ್ನಗಿರಿ ಆಪೂಸು, ನೀಲಂ, ತೋತಾಪುರಿ ತಳಿಗಳನ್ನು ಬೆಳೆಯಲಾಗುತ್ತಿದೆ, ಡಿಸೆಂಬರ್‌ನಲ್ಲಿ ಹೂವು ಬಿಟ್ಟು, ಏಪ್ರಿಲ್ ತಿಂಗಳಲ್ಲಿ ಬರಬೇಕಾಗಿತ್ತು, ಆದರೆ ವಾತಾವರಣದ ವೈಪರೀತ್ಯದಿಂದಾಗಿ ಒಂದು ತಿಂಗಳು ತಡವಾದಂತಾಗಿದೆ’ ಎಂದು ಕಳಕನಗೌಡ ಪಾಟೀಲ ಹಾಗೂ ತೋಟಗಾರಿಕೆ ಸಹಾಯಕರಾದ ವಿಜಯಲಕ್ಷ್ಮೀ ತಿಳಿಸಿದರು.

‘ಸಾಮಾನ್ಯವಾಗಿ ಒಂದೆಡೆ ಎಲೆ ಉದುರಿದರೆ, ಮತ್ತೊಂದೆಡೆ ಚಿಗುರುತ್ತಿತ್ತು. ಆದರೆ ಈ ಬಾರಿ ಉದುರಿದೆಯೇ ಹೊರತು ಚಿಗುರಲಿಲ್ಲ. ಶೇ 100ರಷ್ಟು ಹೂವು ಬಿಟ್ಟಿತ್ತು. ಇದರಲ್ಲಿ ಶೇ 80ರಷ್ಟು ಕಾಯಿಯೂ ಕಚ್ಚಿತು. ಆದರೆ ಕಾಯಿ ಬಲಿಯುವ ಮುನ್ನವೇ ಉದುರಿತು’ ಎಂದು ಬೆನಕನಾಳ ಗ್ರಾಮದ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT