ಕೊಪ್ಪಳ: ಜಿಲ್ಲೆಯ ಪ್ರತಿಷ್ಠಿತ ಕಣವಾಗಿದ್ದ ಗಂಗಾವತಿ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಆಂತರಿಕ ಬೇಗುದಿಯಿಂದ ಬಳಲಿದ್ದ ಕಾಂಗ್ರೆಸ್ ಪಕ್ಷದ ನಾಯಕರ ಮುನಿಸು ಇನ್ನೂ ಕಡಿಮೆಯಾದಂತಿಲ್ಲ.
ಆಗ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಟಿಕೆಟ್ ಕೇಳಿದ್ದರು. ಹೈಕಮಾಂಡ್ ಅನ್ಸಾರಿ ಅವರಿಗೆ ಮಣೆ ಹಾಕಿದ್ದರಿಂದ ಮುನಿಸಿಕೊಂಡಿದ್ದ ಶ್ರೀನಾಥ್, ಗಂಗಾವತಿ ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರ ಮಾಡಿದ್ದರು. ಶ್ರೀನಾಥ್ ಅವರ ಆಪ್ತ, ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ತಮ್ಮ ‘ದಣಿ’ಗೆ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸೇರಿ ಜನಾರ್ದನ ರೆಡ್ಡಿ ಗೆಲುವಿಗೆ, ಅನ್ಸಾರಿ ಸೋಲಿಗೆ ಪ್ರಮುಖ ಕಾರಣರಾಗಿದ್ದರು.
ಸಂಗಟಿ ಅವರು ರೆಡ್ಡಿಗೆ ಬೆಂಬಲ ನೀಡಿದ್ದು, ಶ್ರೀನಾಥ್ ಅಸಹಕಾರ ತೋರಿದ್ದು ತಮ್ಮ ನಾಯಕನ ಸೋಲಿಗೆ ಕಾರಣ ಎನ್ನುವ ಬೇಸರ ಈಗಲೂ ಅನ್ಸಾರಿ ಅವರ ಬೆಂಬಲಿಗರಲ್ಲಿದೆ. ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಕೊಪ್ಪಳದಲ್ಲಿ ನಡೆದ ಮೊದಲ ಪೂರ್ವಭಾವಿ ಸಭೆಯಲ್ಲಿ ಈ ಮುನಿಸು ಮತ್ತೆ ಬಹಿರಂಗವಾಗಿದೆ. ಅನ್ಸಾರಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇನ್ನೊಂದೆಡೆ ಕಾರ್ಯಕ್ರಮದ ಸ್ವಾಗತ ಬ್ಯಾನರ್‌ನಲ್ಲಿ ಎಚ್.ಆರ್. ಶ್ರೀನಾಥ್ ಭಾವಚಿತ್ರಕ್ಕೆ ಹಲವರು ಮಸಿ ಬಳಿದಿದ್ದಾರೆ. ಅಚ್ಚರಿಯೆಂದರೆ ಕೆಆರ್‌ಪಿಪಿ ಮುಖಂಡ ಸಂಗಟಿ ಚಿತ್ರವೂ ಕಾಂಗ್ರೆಸ್ ಕಾರ್ಯಕ್ರಮದಲ್ಲಿತ್ತು!
ಇದು ಜಿಲ್ಲೆಯ ರಾಜಕಾರಣದ ಪಡಸಾಲೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯ ಫಲಿತಾಂಶದ ಬಳಿಕ ಅನ್ಸಾರಿ ಜಿಲ್ಲೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದಾಗ ಮಾತ್ರ ಬಂದಿದ್ದರು. ಶ್ರೀನಾಥ್ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಖುದ್ದು ಅನ್ಸಾರಿಯೇ ಸಿ.ಎಂ.ಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ಇದು ಅನ್ಸಾರಿ ಬೇಸರಕ್ಕೆ ಕಾರಣವಾಗಿದೆ ಎನ್ನುವುದು ಸ್ಪಷ್ಟ.
‘ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯ ಇಲ್ಲ’ ಎಂದು ಪಕ್ಷದ ಜಿಲ್ಲಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳುತ್ತಿದ್ದಾರೆ. ಹೀಗಿದ್ದರೂ ಅನ್ಸಾರಿ ಮತ್ತು ಶ್ರೀನಾಥ್ ನಡುವಣ ಬಿಕ್ಕಟ್ಟು ಪಕ್ಷಕ್ಕೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡುತ್ತದೆ ಎನ್ನುವ ಆತಂಕ ಉಳಿದ ನಾಯಕರದ್ದಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ನಾಲ್ಕೈದು ಜನ ಆಕಾಂಕ್ಷಿಗಳಿರುವ ಕೊಪ್ಪಳ ಕ್ಷೇತ್ರದಲ್ಲಿ ಗಂಗಾವತಿಯ ನಾಯಕರನ್ನು ಸಂಭಾಳಿಸುವುದು ಉಳಿದವರಿಗೆ ಸವಾಲಾಗಿದೆ.
ಅಶಾಂತಿ ಸೃಷ್ಟಿಸಲು ಕಿಡಿಗೇಡಿಗಳು ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ನಾನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಪಕ್ಷದ ನಿಷ್ಠಾವಂತ ನಾಯಕ.–ಎಚ್.ಆರ್. ಶ್ರೀನಾಥ್ ವಿಧಾನಪರಿಷತ್ ಮಾಜಿ ಸದಸ್ಯ
ಯಾರೂ ಪಕ್ಷ ವಿರೋಧಿ ಚಟುವಟಿಕೆ ಮಾಡದಂತೆ ನೋಡಿಕೊಳ್ಳುವೆ. ಎಲ್ಲರೊಂದಿಗೆ ಮಾತನಾಡಿ ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ನನ್ನ ಆದ್ಯತೆ.–ಆರ್.ಬಿ.ತಿಮ್ಮಾಪುರ, ಚುನಾವಣೆ ವೀಕ್ಷಕ ಕೊಪ್ಪಳ ಲೋಕಸಭಾ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.