ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕೆಟ್ ತಪ್ಪಿದ್ದಕ್ಕೆ ಶಕ್ತಿ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಸಂಸದ ಸಂಗಣ್ಣ ಕರಡಿ

21ರಂದು ಬೆಂಬಲಿಗರ ಸಭೆ ಕರೆದ ಸಂಗಣ್ಣ ಕರಡಿ
Published 19 ಮಾರ್ಚ್ 2024, 6:50 IST
Last Updated 19 ಮಾರ್ಚ್ 2024, 6:50 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಸಂಗಣ್ಣ ಕರಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಮಾ. 21ರಂದು ಇಲ್ಲಿನ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಬಸವರಾಜ ಕ್ಯಾವಟರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಿಂದಿನ ಎರಡೂ ಅವಧಿಗೆ ಸಂಸದರಾಗಿದ್ದ ಸಂಗಣ್ಣ ಇದರಿಂದ ಅಸಮಾಧಾನಗೊಂಡು ಪಕ್ಷದ ವರಿಷ್ಠರ ವಿರುದ್ಧ ಹರಿಹಾಯ್ದಿದ್ದರು.

ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಗಣ್ಣ 21ರಂದು ಸಭೆ ನಡೆಸಿ ಕಾರ್ಯಕರ್ತರು ಹಾಗೂ ಪಕ್ಷದ ಎರಡನೆ ಹಂತದ ನಾಯಕರ ಅಭಿಪ್ರಾಯ ಪಡೆಯಲಾಗುವುದು. ಅಲ್ಲಿ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆಯೊ ಅದನ್ನು ಆಧರಿಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು‌.

ನನಗೆ ಟಿಕೆಟ್ ಕೈ ತಪ್ಪಿದಾಗ ಸೌಜನ್ಯಕ್ಕೂ ಪಕ್ಷದ ವರಿಷ್ಠರು ಕರೆ ಮಾಡಿಲ್ಲ, ನನಗೆ ಟಿಕೆಟ್ ತಪ್ಪಿಸಿದವರು ಯಾರು? ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ? ಎನ್ನುವ ಮೂರು ಪ್ರಶ್ನೆಗಳನ್ನು ಅವರು ವರಿಷ್ಠರಿಗೆ ಕೇಳಿದ್ದರು. ಇವುಗಳಿಗೆ ಉತ್ತರ ನೀಡಿದರೆ ಮಾತ್ರ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುವೆ ಎಂದು ಹೇಳಿದ್ದರು.

ಆದರೆ ಬಿಜೆಪಿಯ ರಾಜ್ಯದ ಯಾವ ನಾಯಕರೂ ಇವರ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಈ ವಿಷಯ ಪ್ರಸ್ತಾಪಿಸಿದ ಸಂಗಣ್ಣ ನನ್ನ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡಿಲ್ಲ. ಎರಡು ದಿನಗಳಲ್ಲಿ ಬೆಂಬಲಿಗರ ಸಭೆ ನಡೆಸಿ ಮುಂದಿನ ರಾಜಕೀಯ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು‌.

ನನಗೆ ಟಿಕೆಟ್ ನೀಡದ್ದಕ್ಕೆ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನನಗೆ ಅಧಿಕಾರದ ಆಸೆಯಿಲ್ಲ, ಕಾರ್ಯಕರ್ತರ ಸಲುವಾಗಿ ಸಭೆ ನಡೆಸುತ್ತಿದ್ದೇನೆ. ಕಾಂಗ್ರೆಸ್ ಸೇರಬೇಕೊ, ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೊ ಅಥವಾ ಬಿಜೆಪಿಯಲ್ಲಿಯೇ ಮುಂದುವರಿಯಬೇಕೊ? ಎನ್ನುವ ಬಗ್ಗೆ ಸಭೆ ನಂತರ ನಿರ್ಧರಿಸುವೆ ಎಂದರು‌.

ಬಿಜೆಪಿ ಅಭ್ಯರ್ಥಿ ಬಸವರಾಜ ಪರ ಪ್ರಚಾರಕ್ಕೆ ಬರುವಂತೆ ಜಿಲ್ಲೆಯ ಬಿಜೆಪಿ ನಾಯಕರು ಕರೆಯುತ್ತಿದ್ದಾರೆ. ಒಂದು ವೇಳೆ ನಾನು ಪ್ರಚಾರಕ್ಕೆ ಹೋದರೂ‌ ನಾಯಕತ್ವ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT