ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಭ್ಯರ್ಥಿಗಳ ಭವಿಷ್ಯ ಬರೆಯಲು ಮತದಾರರು ಸಜ್ಜು

Published 7 ಮೇ 2024, 4:48 IST
Last Updated 7 ಮೇ 2024, 4:48 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಅಬ್ಬರದ ಪ್ರಚಾರ, ಟೀಕೆ ಹಾಗೂ ಪ್ರತಿಟೀಕೆಗಳ ಮಹಾಪೂರಕ್ಕೆ ವೇದಿಕೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈಗ ಪ್ರಜಾಪ್ರಭುತ್ವದ ಹಬ್ಬ ಮತದಾನದ ಸಂಭ್ರಮ. ಕ್ಷೇತ್ರದಲ್ಲಿರುವ ಒಟ್ಟು 18,66,397 ಮತದಾರರು ಕಣದಲ್ಲಿರುವ 19 ಜನ ಅಭ್ಯರ್ಥಿಗಳ ಭವಿಷ್ಯವನ್ನು ಮಂಗಳವಾರ ಮತಪೆಟ್ಟಿಗೆಯಲ್ಲಿ ಭದ್ರಪಡಿಸಲಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿ ಹೊಂದಿರುವ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕನಕಗಿರಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಲಿ ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಒಟ್ಟು 2,045 ಮತಗಟ್ಟೆಗಳಿವೆ. ಮತದಾನಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಜೊತೆ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಸೋಮವಾರ ನಿಗದಿತ ಮತಗಟ್ಟೆಗಳಿಗೆ ತೆರಳಿದರು.

ಇಲ್ಲಿನ ಗವಿಸಿದ್ದೇಶ್ವರ ಬಿ.ಇಡಿ. ಕಾಲೇಜಿನ ಮಸ್ಟರಿಂಗ್‌ ಕೇಂದ್ರದಲ್ಲಿ ಸಿಬ್ಬಂದಿಗೆ ತಮ್ಮ ಕರ್ತವ್ಯವನ್ನು ಹಂಚಿಕೆ ಮಾಡಲಾಯಿತು. ಬೆಳಿಗ್ಗೆಯಿಂದಲೇ ಚುನಾವಣಾ ಆಯೋಗದ ನಿಯಮಕ್ಕೆ ತಕ್ಕಂತೆ ತಂಡಗಳನ್ನು ವಿಭಜಿಸಿ ಅವರಿಗೆ ಸಾಮಗ್ರಿ ಹಂಚಿಕೆ ಮಾಡಿ ಕೊಡಲಾಯಿತು. ಕೊಟ್ಟ ಸಾಮಗ್ರಿಗಳನ್ನು ಕೇಂದ್ರದಲ್ಲಿದ್ದುಕೊಂಡೇ ಪರಿಶೀಲಿಸಿಕೊಂಡ ಸಿಬ್ಬಂದಿ ಬಳಿಕ ಮತಗಟ್ಟೆಗೆ ತೆರಳಿದರು. ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮತಯಂತ್ರಗಳನ್ನು ಇರಿಸಲಾಗುತ್ತದೆ.

ದೇಶದ 3ನೇ ಮತ್ತು ರಾಜ್ಯದ 2ನೇ ಹಂತದ ಮತದಾನ ಕ್ಷೇತ್ರದಲ್ಲಿ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರ ರಂಗೇರಿತ್ತು. ಪ್ರಮುಖವಾಗಿ ಸ್ಪರ್ಧೆಯಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ರಾಜ್ಯಮಟ್ಟದ ನಾಯಕರು ಬಂದು ಕ್ಷೇತ್ರದ ಹಲವು ಕಡೆ ಪ್ರಚಾರ ಮಾಡಿದ್ದರು. ಟೀಕೆ ಹಾಗೂ ಪ್ರತಿಟೀಕೆಗಳ ಮಾತಿನ ಪ್ರವಾಹವೂ ಜೋರಾಗಿತ್ತು.

ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬಳಿಕ ಅಭ್ಯರ್ಥಿಗಳು ಕೊನೆಯ ಹಂತದ ಕಸರತ್ತು ಮಾಡಿ ಮತದಾರರ ಮನಗೆಲ್ಲಲು ಪ್ರಯತ್ನಿಸಿದರು. ಮತದಾನದ ಮುನ್ನಾದಿನ ಮನೆಮನೆ ಪ್ರಚಾರಕ್ಕೆ ಅವಕಾಶ ಇದ್ದರೂ ಬಿಸಿಲಿನ ಹೊಡೆತಕ್ಕೆ ಬಹಳಷ್ಟು ಕಡೆ ಪ್ರಚಾರದ ಚಿತ್ರಣ ಕಂಡುಬರಲಿಲ್ಲ. ವಿವಿಧ ಅಭ್ಯರ್ಥಿಗಳು ತಮ್ಮ ಮತಬುಟ್ಟಿ ಗಟ್ಟಿ ಮಾಡಿಕೊಳ್ಳಲು ಆಪ್ತರು, ಸ್ನೇಹಿತರು ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರ ಜೊತೆ ಚರ್ಚಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕದಿಂದ ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮ, ಸಭೆ ಹಾಗೂ ಸಮಾರಂಭಗಳ ಮೂಲಕ ತಮ್ಮ ಸಾಧನೆಗಳನ್ನು ಮುಂದಿಟ್ಟು ಮತಗಳನ್ನು ಕೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮತದಾರರನ್ನು ತಲುಪಲು ಅನೇಕ ತಂತ್ರ ಹಾಗೂ ಪ್ರತಿತಂತ್ರಗಳನ್ನು ಮಾಡಿದ್ದು ಎಲ್ಲರ ಮಾತುಗಳನ್ನು ಮತದಾರರು ಕೇಳಿಸಿಕೊಂಡಿದ್ದಾರೆ. ಅವರ ಮನದಲ್ಲಿರುವ ಗುಟ್ಟು ಏನು ಎನ್ನುವುದು ಮಂಗಳವಾರ ನಡೆಯುವ ಮತದಾನದ ಯಂತ್ರದಲ್ಲಿ ದಾಖಲಾಗಲಿದೆ. ಜೂನ್‌ 4ರಂದು ಮತಗಳ ಎಣಿಕೆ ಕಾರ್ಯ ಜರುಗಲಿದೆ.

ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಸುರಕ್ಷಿತವಾಗಿ ನಡೆಸಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನ ಮತದಾನ ಮಾಡಬೇಕು
ನಲಿನ್‌ ಅತುಲ್‌ ಜಿಲ್ಲಾ ಚುನಾವಣಾಧಿಕಾರಿ
ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ
ಕೊಪ್ಪಳ: ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯವನ್ನು ಜಿಲ್ಲಾ ಚುನಾವಣಾಧಿಕಾರಿ ನಲಿನ್‌ ಅತುಲ್‌ ವೀಕ್ಷಿಸಿದರು. ಕುಷ್ಟಗಿ ಕನಕಗಿರಿ ಕೊಪ್ಪಳ ಮತ್ತು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ನಲಿನ್ ಅತುಲ್ ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುವ ದೃಶ್ಯಗಳು ಮಸ್ಟರಿಂಗ್ ಕೇಂದ್ರದಲ್ಲಿ ಸಾಮಾನ್ಯವಾಗಿತ್ತು. ಚುನಾವಣೆ ಶಾಂತರೀತಿಯಿಂದ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಸಂಖ್ಯೆಯಲ್ಲಿ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಆಯಾ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
ಕಣದಲ್ಲಿರುವ ಅಭ್ಯರ್ಥಿಗಳು
ಡಾ. ಬಸವರಾಜ ಕ್ಯಾವಟರ್‌(ಬಿಜೆಪಿ) ಕೆ. ರಾಜಶೇಖರ ಹಿಟ್ನಾಳ (ಕಾಂಗ್ರೆಸ್‌) ಶಂಕರ (ಬಹುಜನ ಸಮಾಜ ಪಕ್ಷ) ಅನೋಜಿರಾವ್ ಜಿ. (ಸರ್ವ ಜನತಾ ಪಾರ್ಟಿ) ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ (ಚಾಲೆಂಜರ್ಸ್‌ ಪಾರ್ಟಿ) ನಿರುಪಾದಿ ಕೆ. ಗೋಮರ್ಸಿ (ಕರ್ನಾಟಕ ರಾಷ್ಟ್ರ ಸಮಿತಿ) ರಮನಾಜಬಿ (ಆಲ್‌ ಇಂಡಿಯಾ ಉಲಾಮಾ ಕಾಂಗ್ರೆಸ್‌) ಶರಣಪ್ಪ ಗಡ್ಡಿ (ಎಸ್‌ಯುಸಿಐ ಸೋಷಲಿಸ್ಟ್‌) ಸಿ. ಶರಣಬಸಪ್ಪ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಕರ್ನಾಟಕ). ಪಕ್ಷೇತರರು: ಇಮಾಮಸಾಬ್‌ ಜಂಗ್ಲಿಸಾಬ್‌ ಮುಲ್ಲಾ ಕರೀಂಪಾಶ ಗಚ್ಚಿನಮನಿ ಕಾಳಪ್ಪ ಎಚ್ಚರಪ್ಪ ವಿಶ್ವಕರ್ಮ ಬಡಿಗೇರ ಪ.ಯ. ಗಣೇಶ ನಾಗರಾಜ್ ಕಲಾಲ್‌ ಕರಡಿ ಬಸವರಾಜ ಮಲ್ಲಿಕಾರ್ಜುನ ಹಡಪದ ರುಕ್ಮಿಣಿ ಸುರೇಶಗೌಡ ಮುಂದಿನಮನಿ ಮತ್ತು ಹನಮೇಶ ಎಸ್‌.ಎಚ್‌.
ಮತದಾನಕ್ಕೆ ಈ ದಾಖಲೆಗಳನ್ನು ತನ್ನಿ
* ಆಧಾರ್‌ಕಾರ್ಡ್ ನರೇಗಾ ಜಾಬ್‌ಕಾರ್ಡ್. * ಬ್ಯಾಂಕ್‌ ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್ * ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್. * ಚಾಲನಾ ಪರವಾನಗಿ ಅಂಗವಿಕಲರ ಗುರುತಿನ ಚೀಟಿ ಪ್ಯಾನ್‌ಕಾರ್ಡ್. * ಎಂ.ಪಿ.ಆರ್ ಅಡಿಯಲ್ಲಿ ಆರ್.ಜಿ.ಐ ನೀಡಿರುವ ಸ್ಮಾರ್ಟ್‌ ಕಾರ್ಡ್‌. * ಭಾರತೀಯ ಪಾಸ್ ಪೋರ್ಟ್ ಭಾವಚಿತ್ರವಿರುವ ಪಿಂಚಣಿ ದಾಖಲೆ. * ಕೇಂದ್ರ/ರಾಜ್ಯ/ಪಿ.ಎಸ್.ಯು ಸೇವಾ ಗುರುತಿನ ಚೀಟಿ. * ಸಂಸದ ಶಾಸಕ ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT