ಕಾರಟಗಿ: ‘ತುಂಗಭದ್ರಾ ಉಳಿಸಿ, ನಮ್ಮ ಭವಿಷ್ಯಕ್ಕಾಗಿ, ನಮ್ಮ ಕೂಗು’ ಘೋಷಣೆಯೊಂದಿಗೆ ರಾಯಚೂರು ಜಿಲ್ಲಾ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷೆ ಅನೀತಾ ನವಲಕಲ್ ನೇತೃತ್ವದಲ್ಲಿ ರಾಯಚೂರು ಜಿಲ್ಲೆ ಸಿರವಾರದಿಂದ ಆಗಸ್ಟ್ 14ರಿಂದ ಆರಂಭಗೊಂಡು ತುಂಗಭದ್ರಾ ಜಲಾಶಯದವರೆಗಿನ ಪಾದಯಾತ್ರೆಯು ಶನಿವಾರ ಪಟ್ಟಣಕ್ಕೆ ಬಂದಾಗ, ವಿವಿಧ ಬಣಗಳ ರೈತ ಸಂಘಗಳ ಮುಖ್ಯಸ್ಥರು ಸ್ವಾಗತಿಸಿದರು.
ಅನೀತಾ ನವಲಕಲ್ಲ ಮಾತನಾಡಿ, ‘ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಕೊಂಡು ಹೋಗಿದೆ. ಜಲಾಶಯದಿಂದ ಹರಿದದ್ದು ನೀರಲ್ಲ, ರೈತರ ಕಣ್ಣೀರು. ಇಂತಹ ಅವಘಡ ಕಾವೇರಿ ಕಣಿವೆಯಲ್ಲಾದರೆ ತಾಸಿನಲ್ಲೇ ಸರ್ಕಾರವೇ ಸ್ಪಂದಿಸುತ್ತದೆ. ತುಂಗಭದ್ರಾ ಜಲಾಶಯದ ಹಾನಿ ಸಂಭವಿಸಿದಾಗ ರಾಜ್ಯದ ಸಿಎಂಗೆ ಭೇಟಿ ನೀಡಿ, ಹಾರಿಕೆ ಉತ್ತರ ನೀಡಲು ದಿನಗಳೇ ಬೇಕಾದವು. ಜಲಾಶಯದ ಹೆಸರಲ್ಲಿ ನಿರಂತರವಾಗಿ ಹಣ ಲೂಟಿಯಾಗುತ್ತಿದೆ. ಅದರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಾಲುದಾರರಾಗಿದ್ದಾರೆ. ಅವರು ಹೊಡೆದ ಹಣದಲ್ಲಿ ಮತ್ತೊಂದು ಜಲಾಶಯವೇ ನಿರ್ಮಾಣ ಮಾಡಬಹುದಾಗಿತ್ತು.
‘ರಾಜಕಾರಣ ಸೇವೆಗಿರುವ ಕ್ಷೇತ್ರ. ಆ ಕ್ಷೇತ್ರದಲ್ಲಿರುವವರು ಮಾತ್ರ ಭ್ರಷ್ಟರು. ಅವರಿಗೆಲ್ಲ ಪಾಠ ಕಲಿಸಲು ಕಾವೇರಿ ಕಣಿವೆಯ ರೈತರಂತೆ ನಮ್ಮ ಭಾಗದ ರೈತರು ಜಾಗೃತರಾಗದ ಹೊರತು ಸುಲಿಗೆ ನಿರಂತರವಾಗಿತ್ತದೆ ಎಂದು ಹೇಳಿದರು.
‘ಜಲಾಶಯ ನಿರ್ಮಾಣಗೊಂಡು 7 ದಶಕ ಕಳೆದರೂ ಕೆಳ ಭಾಗವಾದ ರಾಯಚೂರು ಜಿಲ್ಲೆ, ಒಂದು ಬೆಳೆಗೆ ನೀರು ಪಡೆಯಲು ನಿರಂತರವಾಗಿ ಹೋರಾಟ ಮಾಡಬೇಕಿದೆ. ನವಲಿ, ಹಣಗಿ ಜಲಾಶಯಗಳ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಿದೆ. ಇದಕ್ಕೆ ಜನಪ್ರತಿನಿಧಿಗಳನ್ನು ಜಾಗೃತಗೊಳಿಸಲು, ರೈತರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ತುಂಗಭದ್ರಾ ಹೆಸರಲ್ಲಿ ಕೋಟ್ಯಂತರ ಹಣದ ಲೂಟಿಯ ಜಾತ್ರೆ ನಿರಂತರವಾಗಿರುತ್ತದೆ’ ಎಂದರು.
ರೈತ ಸಂಘಟನೆಗಳ ಮುಖ್ಯಸ್ಥರಾದ ಶರಣಪ್ಪ ದೊಡ್ಮನಿ, ಮರಿಯಪ್ಪ ಸಾಲೋಣಿ, ವೀರನಗೌಡ ಮಾಲಿಪಾಟೀಲ್, ಬಸವರಾಜ್ ಕೊಟ್ನೇಕಲ್, ಒಳ್ಳೆಪ್ಪ, ರವಿ, ಬಸವಲಿಂಗ, ಮರಿಬಸಪ್ಪ ನಗರಗುಂಡ, ಮಲ್ಲಪ್ಪ, ಯಲ್ಲಪ್ಪ ಕತಾಳಿ, ಸಂಗಪ್ಪ ಭೋವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.