ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಸೌಕರ್ಯವೂ ಇಲ್ಲದ ಮಾರುಕಟ್ಟೆ!

ಬೆಳವಿನಾಳ ಗ್ರಾಮದ ಹೊರವಲಯದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣ
Last Updated 5 ಮೇ 2021, 4:34 IST
ಅಕ್ಷರ ಗಾತ್ರ

ಕೊಪ್ಪಳ: ಸಮೀಪದ ಬೆಳವಿನಾಳ ಗ್ರಾಮದ ಹೊರವಲಯದಲ್ಲಿ ಎಪಿಎಂಸಿ ವತಿಯಿಂದ ಕೋಟ್ಯಾಂತರ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಅಲ್ಲಿ ಸೌಲಭ್ಯಗಳಿಲ್ಲದೆ ಜನ, ವ್ಯಾಪಾರಿಗಳು ಪರದಾಡುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ 35 ಎಕರೆ ವಿಸ್ತಾರದ ಜಮೀನಿನಲ್ಲಿ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಯಿತು. ಅದಕ್ಕಾಗಿ ಜಾಗ ಖರೀದಿಸಲಾಗಿತ್ತು. ಸುತ್ತುಗೋಡೆ ಕಟ್ಟಲು ₹1.34 ಕೋಟಿ ಖರ್ಚು ಮಾಡಲಾಗಿದೆ. ಗೋಡೆಯೊಂದನ್ನು ಬಿಟ್ಟರೆ ಅಲ್ಲಿ ಯಾವ ಸೌಲಭ್ಯವೂ ಇಲ್ಲ!.

ಮಾರುಕಟ್ಟೆ ಸಮಸ್ಯೆ: ನಗರದ ಗಂಜ್‌ ಬಳಿ ಇರುವ ಎಪಿಎಂಸಿ ರೈತರ ಪ್ರಮುಖ ಮಾರುಕಟ್ಟೆಯಾಗಿತ್ತು. ಜನದಟ್ಟಣೆ ಮತ್ತು ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಸಂಚಾರ ಸಮಸ್ಯೆ ತಪ್ಪಿಸಲು ಹೊರ ವಲಯದಲ್ಲಿ ತರಕಾರಿ ಮತ್ತು ಸೊಪ್ಪು ಮಾರಾಟಕ್ಕೆ ಅವಕಾಶ ನೀಡಲಾಯಿತು. ಈಗ ಕೊರೊನಾ ನೆಪದಿಂದ ಅಲ್ಲಿಗೆ ಹೋಗದಿದ್ದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈಗ ಅದು ತಾತ್ಕಾಲಿಕವಾಗಿ ಆರಂಭವಾಗಿದೆ.

ಬಿಸಿಲಿಗೆ ಶೆಡ್‌ಗಳನ್ನು ಹಾಕಿಕೊಂಡು ವ್ಯಾಪಾರಿಗಳು ಠಿಕಾಣಿ ಹೂಡಿದ್ದಾರೆ. ತರಕಾರಿಗಳನ್ನು ಹೊತ್ತು ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿಯೇ ನಸುಕಿನ ಜಾವ ಬರಬೇಕಿರುವುದರಿಂದ ಗ್ರಾಮಸ್ಥರಿಗೂ ಕಿರಿ–ಕಿರಿಯಾಗುತ್ತಿದೆ. ಪರ್ಯಾಯ ಸಂಪರ್ಕ ರಸ್ತೆ ಇಲ್ಲದೆ ತೊಂದರೆಯಾಗಿದೆ.

‘ಈಗ ₹4 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ವಿವಿಧ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಎಪಿಎಂಸಿ ಆಡಳಿತ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೂಲ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ಸಂಸದರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ತಿಳಿಸಿದ್ದಾರೆ.

‘ಬೆಳವಿನಾಳ ಗ್ರಾಮ ಹಾಲವರ್ತಿ ಗಣಿಬಾಧಿತ ಪ್ರದೇಶ ವ್ಯಾಪ್ತಿಗೆ ಬರುವುದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಎಂಎಫ್ ಅನುದಾನದಡಿಯಲ್ಲಿ ರಸ್ತೆ, ಹೈಮಾಸ್ಟ್‌ ವಿದ್ಯುತ್‌ ದೀಪ, ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗುವುದು’ ಎಂದರು.

ಸದ್ಯ 28 ವ್ಯಾಪಾರಿಗಳು ವ್ಯಾಪಾರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ತರಕಾರಿ ಮತ್ತು ಸೊಪ್ಪು ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸೂಕ್ತ ಸೌಲಭ್ಯ ಕಲ್ಪಿಸುವ ಹೊಣೆ ಆಡಳಿತದ ಮೇಲೆ ಇದೆ‘ವಿದ್ಯುತ್ ಸಂಪರ್ಕ ಇಲ್ಲದೇ ತೊಂದರೆಯಾಗುತ್ತಿದ್ದು, ಹೈಮಾಸ್ಟ್ ದೀಪವನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ ಮನವಿ ಮಾಡಿದರು.ಗ್ರಾಮೀಣ ಜನರ ವಹಿವಾಟಿಗೆ ವಿಶಾಲವಾದ ಮಾರುಕಟ್ಟೆ ನಿರ್ಮಾಣ ಮಾಡಿರುವುದು ಒಳ್ಳೆಯದಾದರೂ, ಅದಕ್ಕೆ ಬೇಕಾದ ಸೌಲಭ್ಯ ನೀಡದೇ ಇರುವುದು ದುರಂತ. ಎಲ್ಲ ಸೌಲಭ್ಯಗಳನ್ನು ಆರಂಭಿಸಿ ಅಲ್ಲಿಗೆ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT