ಕೊಪ್ಪಳ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸೆ.30 ರಂದು ಜಿಲ್ಲೆಯಾದ್ಯಂತ ‘ಮೆಗಾ ಲೋಕ್ ಅದಾಲತ್’ ನಡೆಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮೆಗಾ ಲೋಕ್ ಅದಾಲತ್ ಆಚರಿಸುವ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿಸೋಮವಾರ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣ ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣ, ವ್ಯಾಜ್ಯಪೂರ್ವ ಪ್ರಕರಣಗಳು ಅಂತಾ ಪರಿಗಣಿಸಿ, ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರ, ಅಸಲು ದಾವೆ, ಬ್ಯಾಂಕುಗಳಿಗೆ ಸಂಬಂಧಿಸಿದ, ಭೂ ಸ್ವಾಧೀನ, ವೈವಾಹಿಕ ಹಾಗೂ ಜೀವನಾಂಶ, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್ ಹಾಗೂ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣ ಇತ್ಯರ್ಥಪಡಿಸಲು ಇಚ್ಛಿಸಿದ್ದಲ್ಲಿ ಮುಂಚಿತವಾಗಿ ಕಾನೂನು ಸೇವಾ ಸಮಿತಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಕೆ.ಕೆ.ಆರ್.ಟಿ.ಸಿ., ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ತೆರಿಗೆ ಹಾಗೂ ಇನ್ನಿತರ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣ ಇತ್ಯರ್ಥಪಡಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು. ಈ ಮೂಲಕ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕೈಜೋಡಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಕ–ಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ಸಂಚಾರ ಅಧಿಕಾರಿ ಇಂದ್ರಸೇನ ಬಿರಾದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಮುತ್ತಪ್ಪ ಪಿ., ನಗರಸಭೆ ಕಂದಾಯ ನಿರೀಕ್ಷಕ ಎಸ್.ಸಿ ಪಾಟೀಲ್, ಅಬಕಾರಿ ಇಲಾಖೆ ನಿರೀಕ್ಷಕ ಬಸವರಾಜ, ಅರಣ್ಯ ಇಲಾಖೆಯ ರೇಣುಕಪ್ಪ, ಉಮೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.