ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಗುಂಪಿ ಗ್ರಾಮ ಪಂಚಾಯಿತಿ: ನರೇಗಾ ಯೋಜನೆಯಲ್ಲಿ ಮಕ್ಕಳೂ ಕೂಲಿಕಾರರು!

Published 23 ಆಗಸ್ಟ್ 2023, 7:31 IST
Last Updated 23 ಆಗಸ್ಟ್ 2023, 7:31 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಶಿರಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಆರೋಪದ ಬಗ್ಗೆ ತನಿಖೆ ಆರಂಭಿಸಿರುವ ಅಧಿಕಾರಿಗಳು ಮಂಗಳವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆಯಂತೆ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಿರುವ 24 ಜನರ ತಂಡ ಗ್ರಾಮಗಳಿಗೆ ಭೇಟಿ ನೀಡಿದೆ. ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ತಾಲ್ಲೂಕು ಪಂಚಾಯಿತಿ ಇಒ ಶಿವಪ್ಪ ಸುಬೇದಾರ ಆದೇಶಿಸಿದ್ದಾರೆ.

ಶಿರಗುಂಪಿ, ಜಾಲಿಹಾಳ ಮತ್ತು ಬಳೂಟಗಿ ಗ್ರಾಮಗಳಿಗೆ ಪ್ರತಿ ತಂಡದಲ್ಲಿ ಏಳು ಮತ್ತು ಎಂಟು ಸದಸ್ಯರಿದ್ದು ನಾಲಾ, ಕೆರೆ ಹೂಳು ತೆಗೆಯುವುದು, ಸ್ಮಶಾನ ಅಭಿವೃದ್ಧಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಈ ಪಂಚಾಯಿತಿಗಳ ಹಳ್ಳಿಗಳಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಈ ಮಧ್ಯೆ ಒಂದೊಂದು ಕುಟುಂಬಕ್ಕೆ ಒಂದೇ ಇರಬೇಕಾದಲ್ಲಿ ಐದಾರು ಜಾಬ್‌ಕಾರ್ಡ್‌ಗಳು ಸೃಷ್ಟಿಯಾಗಿರುವುದು, ಬಾಲ ಕಾರ್ಮಿಕರ ಹೆಸರಿನಲ್ಲಿಯೂ ಕೆಲ ವರ್ಷಗಳಿಂದ ಜಾಬ್‌ಕಾರ್ಡ್ ಇರುವುದು ತಂಡದ ಗಮನಕ್ಕೆ ಬಂದಿದೆ. ಹಾಗಾಗಿ ನ್ಯಾಯಬೆಲೆ ಅಂಗಡಿ, ಆಹಾರ ಇಲಾಖೆಯಲ್ಲಿನ ಪಡಿತರದಾರರ ಪಟ್ಟಿ ಪಡೆಯಲಾಗಿದ್ದು ಅವುಗಳ ಸಂಖ್ಯೆಗೆ ಅನುಗುಣವಾಗಿ ಜಾಬ್‌ಕಾರ್ಡ್ ಹೊಂದಾಣಿಕೆಯಾಗಬೇಕು. 

23ರಂದು ಜಾಬ್‌ಕಾರ್ಡ್ ಮತ್ತು ಪಡಿತರ ಕಾರ್ಡ್‌ ಪರಿಶೀಲಿಸಲಿರುವ ತಂಡ 24ರಿಂದ ಎರಡು ದಿನ ಪಂಚಾಯಿತಿ ವ್ಯಾಪ್ತಿಯ ಐದೂ ಹಳ್ಳಿಗಳಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ತನಿಖೆ ನಡೆಸಲಿದೆ. ನಕಲಿ ಜಾಬ್‌ ಕಾರ್ಡ್ ಸೃಷ್ಟಿಸುವಲ್ಲಿ ನಿಷ್ಣಾತರಾಗಿರುವ ಕೆಲ ವ್ಯಕ್ತಿಗಳು ಒಂದೇ ಹೆಸರನ್ನು ಬೇರೆ ಬೇರೆ ರೀತಿಯಲ್ಲಿ ಅಂದರೆ ಚಂದ್ರಶೇಖರ ಎಂದಿದ್ದರೆ, ಚಂದ್ರಶೇಖರಯ್ಯ, ಚಂದ್ರಪ್ಪ, ಚಂದ್ರಕಾಂತ ಹೀಗೆ ನಕಲಿ ಹೆಸರುಗಳನ್ನು ಸೇರಿಸುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರೆಚಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ಕೆಲವರು ತನಿಖೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿಯೂ ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ನರೇಗಾ ಅಕ್ರಮ ಒಂದು ಗ್ರಾಮ ಪಂಚಾಯಿತಿಗೆ ಸೀಮಿತವಾಗಿಲ್ಲ. ಹಾಗಾಗಿ ಎಲ್ಲ ಗ್ರಾಪಂಗಳಲ್ಲೂ ತನಿಖೆ ನಡೆಸಿ ಅಕ್ರಮ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು.
ಅಮರೇಶ ಕಡಗದ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT