ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯಿಂದ ಕೆಲಸ ಮಾಡಿ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾಸ್ಪತ್ರೆಯ ಕೋವಿಡ್- ವಾರ್ಡ್‌ಗೆ ಭೇಟಿ, ಪರಿಶೀಲನೆ
Last Updated 30 ಏಪ್ರಿಲ್ 2021, 3:28 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಕಾರಣದಿಂದ ಜನರು ಭಯಭೀತರಾಗಿದ್ದಾರೆ. ರೋಗಿಗಳಿಗೆ ಸೇವಾ ಮನೋಭಾವನೆಯಿಂದ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆಯಿಂದ ವರ್ತಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದರು.

ಅವರು ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಚಿಕಿತ್ಸಾ ಸೌಲಭ್ಯಗಳ ಕುರಿತು ಪರಿಶೀಲಿಸಿ, ‘ನಾನೂ ಲಸಿಕೆ ಹಾಕಿಸಿಕೊಂಡಿದ್ದೇನೆ, ನೀವೂ ಲಸಿಕೆ ಹಾಕಿಸಿಕೊಳ್ಳಿ’ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಧೈರ್ಯ ತುಂಬಿದರು.

‘ರೋಗಿಗಳನ್ನು ಹೊರಗಡೆ ನಿಲ್ಲಿಸಬೇಡಿ. ರೋಗಿಗಳನ್ನು ಒಳಗಡೆ ಕರೆದುಕೊಂಡು ಹೋಗಿ ಕೋವಿಡ್ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡಬೇಕು. ಪ್ರಸ್ತುತ ಜನರು ಭಯಭೀತರಾಗಿದ್ದು, ಮಾನವೀಯತೆಯಿಂದ ಕೆಲಸ ಮಾಡಬೇಕು. ಈ ಕುರಿತು ಸಿಬ್ಬಂದಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ಅವರಿಗೆ ಸೂಚನೆ ನೀಡಿದರು.

ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಹಾಕಿಸಿಕೊಳ್ಳುತ್ತಿದ್ದ ವೃದ್ಧರು, ಮಹಿಳೆಯರಿಗೆ ಧೈರ್ಯ ತುಂಬಿದ ಸಚಿವರು, ನಾನು ಎರಡು ಬಾರಿ ಲಸಿಕೆ ಹಾಕಿಸಿಕೊಂಡಿದ್ದೇನೆ. ನೀವು ಲಸಿಕೆ ಹಾಕಿಸಿಕೊಳ್ಳಿ ಏನೂ ಆಗುವುದಿಲ್ಲ, ಭಯ ಪಡಬೇಡಿ ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ
ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್-19 ನಿಯಂತ್ರಣ ತಪ್ಪುತ್ತದೆ ಎನ್ನುವ ಉದ್ದೇಶಕ್ಕೆ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಕೋವಿಡ್-19ನಿಂದ ಸರಪಳಿ ನಿರ್ಮಾಣಗೊಂಡಿದೆ. ಈ ಸರಪಳಿ ಮುರಿಯಲು 14 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ಕೊರತೆ ಇಲ್ಲ. ಮುಂಬರುವ ದಿನಗಳಲ್ಲಿ ಬೇಕಾಗುವ ಬೆಡ್, ವೆಂಟಿಲೇಟರ್ ಹಾಗೂ ಆಕ್ಸಿಜನ್‌ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಸವಾಲುಗಳನ್ನು ಎದುರಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸನ್ನದ್ಧರಾಗಿದ್ದೇವೆ ಎಂದರು.

ಗ್ರಾಮ ಪಂಚಾಯತಿ ಪಿಡಿಒ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರ್ದೇಶನ ನೀಡಲಾಗಿದ್ದು, ಬೆಂಗಳೂರಿನಿಂದ ಹೊಸದಾಗಿ ಗ್ರಾಮೀಣ ಪ್ರದೇಶಕ್ಕೆ ಬಂದವರಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸಿದ್ದೇವೆ. ಹೆಚ್ಚು ಕೋವಿಡ್-19 ರೋಗಿಗಳು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಅವಶ್ಯವಿರುವ ಸೌಲಭ್ಯಗಳಿದ್ದರೆ ಮಾತ್ರ ಹೋಂ ಐಸೋಲೇಷನ್‌ನಲ್ಲಿರಲು ಸೂಚಿಸಬೇಕು. ಇಲ್ಲವಾದಲ್ಲಿ ಕೋವಿಡ್-19 ಕೇಂದ್ರದಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದರು.

ರಾಜ್ಯ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2600 ಕೋಟಿ ಮೀಸಲಿಟ್ಟಿದೆ. ಅವಶ್ಯವಿರುವ ಕೋವಿಡ್-19 ಚಿಕಿತ್ಸಾ ಸಾಮಗ್ರಿಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ ಕೋವಿಡ್-19 ಕೇಂದ್ರದ ಹಾಗೂ ಇರುವಂತಹ ಚಿಕಿತ್ಸಾ ಸೌಲಭ್ಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಿ, ಸದ್ಯದ ಕೋವಿಡ್-19 ಪ್ರಕರಣಗಳನ್ನು ವಿವರಿಸಿದರು.

ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ್ ಇದ್ದರು.

ಮಾನವೀಯತೆ ಮೆರೆದ ಸಚಿವ:ಕೋವಿಡ್‌ ಕೇರ್ ಸೆಂಟರ್‌ನಲ್ಲಿ ದಾಖಲಿಸಿಕೊಳ್ಳದೆ ರೋಗಿಯೊಬ್ಬನಿಗೆ ಸಕಾಲಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ವೈದ್ಯಕೀಯ ಸಿಬ್ಬಂದಿ ಕಾರ್ಯ ವೈಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶಗೊಂಡ ಘಟನೆ ಗುರುವಾರ ನಡೆಯಿತು.

ಕೋವಿಡ್ ಸಾಂಕ್ರಾಮಿಕ ರೋಗದ ಕುರಿತು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಪರಿಶೀಲನಾ ಸಭೆಗೆ ಬಂದಿದ್ದ ಸಚಿವರು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಕಣ್ಣಾರೆ ಕಂಡು ಕೆಂಡಾಮಂಡಲವಾದರು.

ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆ ಎದುರು ನೋವಿನಿಂದ ಒದ್ದಾಡುತ್ತಿರುವುದನ್ನು ಕಂಡು ‘ಇವರನ್ನು ಯಾಕೆ ಇಲ್ಲಿ ಮಲಗಿಸಿದ್ದೀರಿ, ಒಳಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಬಾರದೇ, ನಿಮಗೆ ಮಾನವೀಯತೆ ಇಲ್ಲವೇ’ ಎಂದು ಕೋಪಗೊಂಡರು.

ಸಚಿವರ ಕೋಪಕ್ಕೆ ಬೆದರಿದ ಸಿಬ್ಬಂದಿ ತಡಬಡಾಯಿಸಿ ರೋಗಿಯನ್ನು ಒಳಗೆ ಕರೆದುಕೊಂಡು ಹೋದರು.

ನಂತರ ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ.ಎಸ್‌.ಬಿ.ದಾನರಡ್ಡಿ ಅವರಿಗೆ ರೋಗಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಿ, ಅಗತ್ಯ ಇದ್ದವರಿಗೆ ಮೊದಲು ಚಿಕಿತ್ಸೆ ನೀಡಿ, ಇಂತಹ ಘಟನೆ ಮರುಕಳಿಸಬಾರದು ಎಂದು ಸೂಚನೆ ನೀಡಿದರು.

ಜೊತೆಗಿದ್ದ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರತ್ತ ನೋಡಿ, ಯಾವುದೇ ಕಾರಣಕ್ಕೂ ಕೊರೊನಾ ಸಂಬಂಧಿ ರೋಗಿಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಸಚಿವರ ಸೂಚನೆಯಿಂದ ರೋಗಿಯನ್ನು ಒಳಗೆ ಕರೆದುಕೊಂಡು ಹೋದ ವೈದ್ಯರು ಚಿಕಿತ್ಸೆಗೆ ಮುಂದಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT