ಕನಕಗಿರಿ/ಗಂಗಾವತಿ (ಕೊಪ್ಪಳ ಜಿಲ್ಲೆ): ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೀರಾಳ ಕಲ್ಗುಡಿ ಗ್ರಾಮದಲ್ಲಿ ರಸ್ತೆ ಸೌಲಭ್ಯ ಕೇಳಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ಹಾಗೂ ಗ್ರಾಮದ ಹಲವರ ನಡುವೆ ಭಾನುವಾರ ಜಟಾಪಟಿ ನಡೆದಿದೆ. ಈ ವೇಳೆ ಸಚಿವರು ಬಹಿರಂಗವಾಗಿಯೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು ಕಲ್ಗುಡಿ ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಕುಣಿಕೇರಿ ಹಾಗೂ ಮತ್ತೊಬ್ಬ ಸದಸ್ಯೆಯ ಪತಿ ಪಾಮಣ್ಣ ಚಲವಾದಿ ರಸ್ತೆ ಸೌಲಭ್ಯ ಕಲ್ಪಿಸಿ ಎಂದು ಕೇಳಿಕೊಂಡಾಗ ಸಚಿವರು ಮೊದಲು ಸಮಾಧಾನದಿಂದ ಉತ್ತರಿಸಿದ್ದಾರೆ. ಪ್ರಶ್ನೆ ಕೇಳಿದವರು ಮತ್ತೆ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದು ತಂಗಡಗಿ ಅವರನ್ನು ಕೆರಳುವಂತೆ ಮಾಡಿದೆ. ವಾಗ್ವಾದ ಜೋರಾದಾಗ ಸ್ಥಳೀಯರು ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು.
ಬಳಿಕ ಯಲ್ಲಪ್ಪ ಹಾಗೂ ಪಾಮಣ್ಣ ಅವರನ್ನು ಪೊಲೀಸರು ಗಂಗಾವತಿ ಗ್ರಾಮೀಣ ಠಾಣೆಗೆ ಮಧ್ಯಾಹ್ನ ಕರೆದುಕೊಂಡು ಬಂದಿದ್ದರಿಂದ ಬಿಜೆಪಿ ಕಾರ್ಯಕರ್ತರು ಕೆರಳಿದರು. ರಸ್ತೆ ಸೌಲಭ್ಯ ಕೇಳಿದ್ದಕ್ಕೆ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತೀರಾ? ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಸಂಜೆ ಹೊತ್ತಿಗೆ ಪೊಲೀಸ್ ಠಾಣೆಗೆ ಬಂದ ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ಬಸವರಾಜ ದಢೇಸೂಗೂರು ‘ರಸ್ತೆ ಸೌಲಭ್ಯ ಕೇಳಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಲಿತ ಸಮುದಾಯದ ವ್ಯಕ್ತಿಯಾಗಿದ್ದು ಸಚಿವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ದರ್ಪದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೌಲಭ್ಯ ಕೇಳುವುದು ಕೂಡ ತಪ್ಪೇ’ ಎಂದು ಪ್ರಶ್ನಿಸಿದರು. ಸಚಿವರ ದುರ್ವರ್ತನೆ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕರ್ತರ ಒತ್ತಾಯದ ಬಳಿಕ ಅವರಿಬ್ಬರನ್ನೂ ಠಾಣೆಯಿಂದ ಬಿಟ್ಟು ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.