ಶುಕ್ರವಾರ, ಮೇ 27, 2022
23 °C
ರ‍್ಯಾಕ್‌ ಪಾಯಿಂಟ್‌ನಿಂದ ವ್ಯಾಪಾರಿಗಳಿಗೆ ಅನುಕೂಲ, ವಹಿವಾಟು ಹೆಚ್ಚಳದ ನಿರೀಕ್ಷೆ: ಶಾಸಕ

ಗೂಡ್ಸ್ ರೈಲಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಇಲ್ಲಿನ ವಿದ್ಯಾನಗರ ಸಮೀಪದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಗೂಡ್ಸ್‌ ರೈಲಿಗೆ ಶಾಸಕ ಪರಣ್ಣ ಮುನವಳ್ಳಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,‘ಕಳೆದ ಎರಡು ವರ್ಷಗಳ ಹಿಂದೆ ಗಂಗಾವತಿ ನಗರದಲ್ಲಿ ರೈಲ್ವೆ ನಿಲ್ದಾಣ ಆದ ನಂತರ ಗೂಡ್ಸ್‌ ರೈಲಿಗೆ ಬೇಡಿಕೆ ಇತ್ತು. ಆ ಕನಸು ಇಂದು ನೆರವೇರಿದೆ. ವಾಣಿಜ್ಯ ನಗರವಾಗಿರುವ ನಮ್ಮ ಗಂಗಾವತಿಯ ಅಕ್ಕಿಯು ಹೊರ ರಾಜ್ಯ, ದೇಶಗಳಿಗೆ ರಫ್ತು ಆಗುತ್ತದೆ. ಆ ನಿಟ್ಟಿನಲ್ಲಿ ಇಲ್ಲಿನ ರೈಸ್‌ ಮಿಲ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ರ‍್ಯಾಕ್‌ ಲೋಡಿಂಗ್‌ ಮೂಲಕ ಹೊರ ರಾಜ್ಯಗಳಿಗೆ ಅಕ್ಕಿ ಸೇರಿದಂತೆ ರೈತರು ಬೆಳೆದ ಭತ್ತ, ಮೆಕ್ಕೆಜೋಳ ಅಥವಾ ವಿವಿಧ ಸರಕುಗಳನ್ನು ರೈಲ್ವೆ ಮೂಲಕ ಕಳುಹಿಸಲು ಸಹಕಾರಿಯಾಗಲಿದೆ. ಇಂದು ಎನ್‌.ಆರ್‌ ರೈಸ್‌ ಮಿಲ್‌ ಇಂಡಸ್ಟ್ರಿ ಹಾಗೂ ಎಂ.ಕೆ ಕೇಸರಿ ಇಂಡಸ್ಟ್ರಿ ಅವರು ರೈಲ್ವೆ ಮೂಲಕ 1300 ಟನ್‌ ಅಕ್ಕಿಯನ್ನು ಅಸ್ಸಾಂಗೆ ಕಳುಹಿಸುತ್ತಿದ್ದಾರೆ. ಇದರಿಂದ ಗಂಗಾವತಿ ನಗರ ಬೆಳವಣಿಗೆಗೆ ಹಾಗೂ ರೈತರಿಗೆ, ಕಾರ್ಮಿಕರಿಗೆ ಅನುಕೂವಾಗಲಿದೆ ಎಂದರು.

ನಂತರ ಉದ್ಯಮಿ ಎನ್‌.ಆರ್‌.ಶ್ರೀನಿವಾಸರಾವ್‌ ಮಾತನಾಡಿ,‘ಗಂಗಾವತಿ ಉದ್ಯಮಿಗಳ ಬಹುದಿನದ ಕನಸು ಇಂದು ಸಾಕಾರಗೊಂಡಿದೆ. ಗೂಡ್ಸ್‌ ರೈಲು ಆರಂಭದಿಂದ ವ್ಯಾಪಾರ ವಲಯದಲ್ಲಿ, ರೈತಾಪಿ, ಕಾರ್ಮಿಕ ವರ್ಗದವರಿಗೆ ಪ್ರತ್ಯಕ್ಷವಾಗಿ ಲಾಭವಾಗಲಿದೆ. ಇದರಿಂದ ದೊಡ್ಡ ಉದ್ಯಮ ಬೆಳೆಯಲಿದ್ದು, ಕೇವಲ ಅಕ್ಕಿ ರಫ್ತು ಅಷ್ಟೇ ಅಲ್ಲದೆ, ಭತ್ತ, ಮೆಕ್ಕೆಜೋಳ ಹಾಗೂ ಇನ್ನಿತರ ಕೃಷಿ ಸರಕುಗಳು ಇಲ್ಲಿಂದ ರವಾನೆ ಮಾಡಲು ಅನುಕೂಲವಾಗಲಿದೆ’ ಎಂದರು.

ಇದುವರೆಗೂ ನಾವು ಅಕ್ಕಿಯನ್ನು ರಾಯಚೂರು, ಕೊಪ್ಪಳ, ಗಿಣಿಗೇರಾದಲ್ಲಿ ರ‍್ಯಾಕ್‌ ಲೋಂಡಿಗ್‌ ಮಾಡುತ್ತಿದ್ದೆವು. ಸುಮಾರು 50-60 ಕಿ.ಮೀ ನಮ್ಮ ಗಾಡಿಗಳನ್ನು ತೆಗೆದುಕೊಂಡು ಹೋಗಿ ಲೋಡ್‌ ಮಾಡುತ್ತಿದ್ದೆವು. ಹೆಚ್ಚು ಹಣ ಖರ್ಚು ಆಗುತ್ತಿತ್ತು. ಆದರೆ, ಇದೀಗ ಗಂಗಾವತಿಯಲ್ಲಿ ರ‍್ಯಾಕ್‌ ಪಾಯಿಂಟ್‌ ಆಗಿರುವುದರಿಂದ ಸಾಕಷ್ಟು ರೈಸ್‌ ಮಿಲರ್ಸ್‌ಗಳಿಗೆ, ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಉದ್ಯಮಿಗಳಾದ ನೆಕ್ಕಂಟಿ ಸೂರಿಬಾಬು, ಕೆ.ಪಂಪಾಪತಿ, ಚಿಲಕೂರಿ ಸೂರ್ಯನಾರಾಯಣ, ಸಿಂಗನಾಳ್‌ ಜಗದೀಶಪ್ಪ, ಲಾರಿ ಮಾಲೀಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಕಾರ್ಮಿಕರು ರೈಲ್ವೆ ಅಧಿಕಾರಿಗಳು ಹಾಗೂ ಎಪಿಎಂಸಿ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು