ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ನಡುವೆ ಆರೋಪ, ಪ್ರತ್ಯಾರೋಪ

11 ವರ್ಷಗಳ ಬಳಿಕ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ
Last Updated 8 ಜುಲೈ 2022, 14:25 IST
ಅಕ್ಷರ ಗಾತ್ರ

ಕೊಪ್ಪಳ: ಹನ್ನೊಂದು ವರ್ಷಗಳ ಹಿಂದೆ ಖರೀದಿ ಮಾಡಲಾಗಿದ್ದ ನಿವೇಶನಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಶುಕ್ರವಾರ ನಗರದಲ್ಲಿ ನಡೆಯಿತು. ಈ ವೇಳೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಡುವೆ ಆರೋಪ, ಪ್ರತ್ಯಾರೋಪ ನಡೆಯಿತು.

ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಜನಪ್ರತಿನಿಧಿಗಳು ಹಕ್ಕುಪತ್ರ ವಿತರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಗಣ್ಣ ಕರಡಿ ’ಮನೆಗಳ ನಿರ್ಮಾಣಕ್ಕಾಗಿ 2011ರಲ್ಲಿ ನಾನು ಶಾಸಕನಾಗಿದ್ದಾಗ 111 ಎಕರೆ ಜಮೀನು ಖರೀದಿಸಲಾಗಿತ್ತು. ಕಾಂಗ್ರೆಸ್‌ ಶಾಸಕರ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಫಲಾನುಭವಿಗಳಿಗೆ ನಿವೇಶನ ಕೊಡಲು ಇಷ್ಟು ವರ್ಷ ಕಾಯಬೇಕಾಯಿತು‘ ಎಂದರು.

‘ಫಲಾನುಭವಿಗಳಿಗೆ ಕೆಲ ಮನೆಗಳನ್ನು ಕಟ್ಟಲಾಗಿದ್ದು, ಕೆಲ ದಿನಗಳ ಹಿಂದೆ ಆ ಮನೆಗಳನ್ನು ಪರಿಶೀಲಿಸಿದ್ದೇನೆ. ಆದರೆ, ಅವು ವಾಸಕ್ಕೆ ಯೋಗ್ಯವಿಲ್ಲದ ಕಾರಣ ನಿವೇಶನಗಳನ್ನೇ ಕೊಡಲು ತೀರ್ಮಾನಿಸಲಾಯಿತು. ಶಾಸಕರು 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬಹುದಿತ್ತು‘ ಎಂದು ಟೀಕಿಸಿದರು.

‘ಫಲಾನುಭವಿಗಳಿಂದ ₹30 ಸಾವಿರ ವಂತಿಕೆ ಕಟ್ಟಿಸಿಕೊಳ್ಳಲಾಗಿದೆ. ಅವರಿಗೆ ಈಗ ನಿವೇಶನ ನೀಡಲಾಗಿದ್ದು, ಮನೆ ಕಟ್ಟಿಕೊಡುವ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರ ಬಳಿ ಚರ್ಚಿಸುವೆ‘ ಎಂದು ಹೇಳಿದರು.

ಬಳಿಕ ಮಾತನಾಡಿದ ರಾಘವೇಂದ್ರ ಹಿಟ್ನಾಳ ’ಸರ್ಕಾರದ ಸಬ್ಸಿಡಿ, ಬ್ಯಾಂಕ್‌ನಿಂದ ಸಾಲ ಪಡೆಯಲು ಆದ ಸಮಸ್ಯೆ ಬಗ್ಗೆ ಸಂಸದರಿಗೆ ಮಾಹಿತಿ ಇದ್ದಂತಿಲ್ಲ. 2011ರಲ್ಲಿಯೇ ಅವೈಜ್ಞಾನಿಕ ಸ್ಥಳದಲ್ಲಿ ಭೂಮಿ ಖರೀದಿಸಲಾಗಿದೆ. ನಗರ ಪ್ರದೇಶಗಳಲ್ಲಿರುವ ಫಲಾನುಭವಿಗಳು ಗ್ರಾಮೀಣ ಪ್ರದೇಶ ವ್ಯಾಪ್ತಿಯ ಚಿಕ್ಕ ಸಿಂಧೋಗಿ ಬಳಿ ಇರುವ 594 ನಿವೇಶಗಳ ಬಳಿ ಹೋಗಿ ವಾಸಮಾಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಯಾವುದೇ ಹೊಸ ಬಡಾವಣೆಯಾದರೂ ಮೊದಲು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿತ್ತು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ ಮಾಡಿಸಿದ್ದೇನೆ. ಸಾಲ ಕೊಡಲುಬ್ಯಾಂಕ್‌ಗಳು ಹಿಂದೇಟು ಹಾಕಿದವು. ಮಾರ್ಟ್‌ಗೇಜ್‌ ಮಾಡಿಕೊಳ್ಳಲು ಫಲಾನುಭವಿಗಳು ಒಪ್ಪಲಿಲ್ಲ. ಈಗಿನ ಸಂಸದರು ಕೇಂದ್ರದಿಂದ ಅನುದಾನ ತಂದಿದ್ದರೆ ಮನೆಗಳನ್ನು ಕಟ್ಟಬಹುದಿತ್ತು’ ಎಂದು ತಿರುಗೇಟು ನೀಡಿದರು.

ನಿವೇಶನ ಹಕ್ಕುಪತ್ರ ವಿತರಣೆಗೆ ಚಾಲನೆ

ಕೊಪ್ಪಳ: ನಗರಸಭೆ ವತಿಯಿಂದ ‘2000 ಗುಂಪು ಮನೆಗಳು’ ಕಾರ್ಯಕ್ರಮದ ಅಡಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಸಂಸದ ಕರಡಿ ಸಂಗಣ್ಣ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.

ನಿವೇಶನ ಹಕ್ಕುಪತ್ರ ನೀಡಿದ ಜಾಗದಲ್ಲಿ ಆದಷ್ಟು ಬೇಗನೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಂಸದರು ಹೇಳಿದರು. ರಾಘವೇಂದ್ರ ಹಿಟ್ನಾಳ ಮೂಲ ಸೌಕರ್ಯಗಳ ಕೊರತೆ ಕಾರಣದಿಂದ ಕೆಲವರು ನಿವೇಶನ ಜಾಗಕ್ಕೆ ಹೋಗುತ್ತಿಲ್ಲ. ಅಧಿಕಾರಿಗಳು ಈ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಭೂಮಕ್ಕನವರ್, ಉಪಾಧ್ಯಕ್ಷೆ ಆಯಿಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ ಪಾಲ್ಗೊಂಡಿದ್ದರು.

ಸಾಂಕೇತಿಕವಾಗಿ ಕೆಲವರಿಗೆ ಹಕ್ಕುಪತ್ರ ನೀಡಲಾಗಿದೆ. ಶನಿವಾರದಿಂದಲೇ ಫಲಾನುಭವಿಗಳ ಮನೆಬಾಗಿಲಿಗೆ ಹಕ್ಕುಪತ್ರ ತಲುಪಿಸಲಾಗುವುದು.
- ಹನುಮಂತಪ್ಪ ಎನ್‌. ಭಜಕ್ಕನವರ,ಪೌರಾಯುಕ್ತರು, ನಗರಸಭೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT