ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮೋದಿ ಅಲೆ ಹೆಚ್ಚಳ: ಬಿ.ವೈ ವಿಜಯೇಂದ್ರ

Published 5 ಮೇ 2024, 6:16 IST
Last Updated 5 ಮೇ 2024, 6:16 IST
ಅಕ್ಷರ ಗಾತ್ರ

ಗಂಗಾವತಿ: ‘ಲೋಕಸಭೆ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ ಆಗಿದ್ದು, ದೇಶದ ಬಹುತೇಕ ಜನತೆ ನರೇಂದ್ರ ಮೋದಿಯೇ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ. ರಾಜ್ಯದ ಜನರು ತಮ್ಮ ತಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಮಾಡಿದರು.

ಇಲ್ಲಿನ ಜಯನಗರದ ಆಂಜನೇಯ ದೇವಸ್ಥಾನ ಸಮೀಪ ಶುಕ್ರವಾರ ಸಂಜೆ ನಡೆದ 1ನೇ ಮಹಾಶಕ್ತಿ ಕೇಂದ್ರದ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಮತಯಾಚನೆ ಮಾಡಿ ಮಾತನಾಡಿದರು.

‘ಸಿಎಂ ಸಿದ್ದರಾಮಯ್ಯ ಪ್ರಚಾರದ ಕಾರ್ಯಕ್ರಮಗಳೆಲ್ಲೆಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಹೆಚ್ಚು ಭಾಷಣ ಮಾಡುತ್ತಿದ್ದರು‌. ಇದೀಗ ರಾಜ್ಯದಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ಗ್ಯಾರಂಟಿ ಯೋಜನೆ ಭಾಷಣದ ಮೇಲೆ ವಿಶ್ವಾಸ ಕಳೆದುಕೊಂಡು ಕೆಲಸಕ್ಕೆ ಬಾರದ ವಿಷಯವನ್ನಿಟ್ಟುಕೊಂಡು ರಾಜ್ಯದ ಎಲ್ಲೆಡೆ ರಂಪ ಮಾಡುತ್ತಿದ್ದಾರೆ. ಮತದಾನಕ್ಕೆ ಇನ್ನೂ 2 ದಿನಮಾತ್ರ ಬಾಕಿ ಉಳಿದಿದ್ದು, ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರ ಸಾಧನೆ ಮತ್ತು ಜನರಿಗೆ ನೀಡಿದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೇ ಮತದಾನದ ದಿನ ಬೆಳಿಗ್ಗೆ 7ಕ್ಕೆ ಬೂತ್‌ನಲ್ಲಿ ಕುಳಿತುಕೊಂಡು ಜನರಿಗೆ ಬಿಜೆಪಿಗೆ ಮತ ನೀಡುವಂತೆ ತಿಳಿಸಿಬೇಕು’ ಎಂದು ಮಾಹಿತಿ ನೀಡಿದರು.

ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶಕ್ಕೆ 3 ಕೋಟಿ ನಿವೇಶನ ಮಂಜೂರು ಮಾಡಲಿದ್ದು, ಅದರಲ್ಲಿ 10ರಿಂದ 12 ಸಾವಿರ ನಿವೇಶನಗಳನ್ನು ಗಂಗಾವತಿ ಕ್ಷೇತ್ರಕ್ಕೆ ಮಂಜೂರಾತಿ ಮಾಡಿಸಿ, ಬಡವರಿಗೆ ನೀಡಲಾಗುತ್ತದೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಫುಟ್‌ಬಾಲ್‌ ಚಿಹ್ನೆ ಇಟ್ಟಕೊಂಡು ಇಕ್ಬಾಲ್‌ನನ್ನು ಓಡಿಸಿದ್ದೇನೆ. ಈಗ ನಾನು, ಪರಣ್ಣ ಮುನವಳ್ಳಿ ಇಬ್ಬರು ಸೇರಿ ಫುಟ್‌ಬಾಲ್‌ ಆಡಿ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ’ ಎಂದರು‌.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಸರಳ, ಸಜ್ಜನಿಕೆಯ ವ್ಯಕ್ತಿ. ದೇಶ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಅವರಿಗೆ ಮತ ಹಾಕಿಸಬೇಕು’ ಎಂದರು.

ಮಾಜಿ ಸಂಸದ ಶಿವರಾಮೆಗೌಡ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಶಾಸಕ ಬಸವರಾಜ ದಢೆಸೂಗೂರು, ಗಿರೇಗೌಡ, ಮನೋಹರಗೌಡ ಹೇರೂರು, ಕಾಶಿನಾಥ ಚಿತ್ರಗಾರ, ರಮೇಶ ಹೊಸಮಲಿ, ಯಮನೂರ ಚೌಡ್ಕಿ ಸೇರಿ ಪಕ್ಷದ ಕಾರ್ಯಕರ್ತರು,‌ ಮಹಿಳೆಯರು ಪಾಲ್ಗೊಂಡಿದ್ಧರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT