ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ತಾಣದ ಮೇಲೆ ನಿಗಾ ವಹಿಸಿ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

Published 8 ಡಿಸೆಂಬರ್ 2023, 4:25 IST
Last Updated 8 ಡಿಸೆಂಬರ್ 2023, 4:25 IST
ಅಕ್ಷರ ಗಾತ್ರ

ಕೊಪ್ಪಳ: ತಂತ್ರಜ್ಞಾನ ಬೆಳೆದಂತೆಲ್ಲ ಅಪರಾಧ ಚಟುವಟಿಕೆಗಳ ಸ್ವರೂಪವೂ ಬದಲಾಗಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಹಂತದಿಂದಲೇ ಸಾಮಾಜಿಕ ತಾಣಗಳ ಪೋಸ್ಟ್ ಗಳ‌ ಮೇಲೆ ನಿಗಾ ವಹಿಸಬೇಕು ಎಂದು ಎಡಿಜಿಪಿ (ತರಬೇತಿ) ಅಲೋಕ್ ಕುಮಾರ್ ಹೇಳಿದರು.

ನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ನಡೆದ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಸಾಮಾಜಿಕ ತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕುವುದರಿಂದ ಸಮಾಜದ ಶಾಂತಿಗೆ ಧಕ್ಕೆ ಉಂಟಾಗುತ್ತಿದೆ. ಇದು ಕೆಲವೇ ಸಮಯದಲ್ಲಿ ಕೋಟ್ಯಂತರ ಜನರನ್ನು ತಲುಪುತ್ತಿದೆ. ಆದ್ದರಿಂದ ಸಾಮಾಜಿಕ ತಾಣಗಳ ಅಪರಾಧ ಚಟುವಟಿಕೆ ಮೇಲೆ ಕಣ್ಗಾವಲು ವಹಿಸಬೇಕು ಎಂದರು.

ಹೆದ್ದಾರಿಗಳಲ್ಲಿ ‌ನಡೆಯುತ್ತಿರುವ ಅಪಘಾತಗಳಲ್ಲಿ ಪ್ರತಿ ವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2022ರಲ್ಲಿ ದೇಶದಲ್ಲಿ ನಡೆದ ಅಪಘಾತದಲ್ಲಿ 1,68,391 ಜನ‌ ಮೃತಪಟ್ಟಿದ್ದಾರೆ. ದಿನಕ್ಕೆ 462 ಮಂದಿ ಸಾಯುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷ 11,700 ಜನ ಮೃತಪಟ್ಟಿದ್ದಾರೆ. ಪ್ರತಿ ಗಂಟೆಗೆ 30ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಆದ್ದರಿಂದ ಅಪಘಾತಗಳ ಪ್ರಕರಣಕ್ಕೆ ಕಡಿವಾಣ ಹಾಕಲು ಕ್ರಮ ಜರುಗಿಸಬೇಕು ಎಂದರು.

ಪಥ ಸಂಚಲನ

ಪಥ ಸಂಚಲನ

ಈಗ ಬೇರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ ಜನರ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆದರೆ ಅದು ದೊಡ್ಡ ‌ಕಳಂಕ. ಬೇಗನೆ ಶ್ರೀಮಂತರಾಗಬೇಕು ಎನ್ನುವ ‌ಮನೋಭಾವನೆ ಯಾರಿಗೂ ಬೇಡ ಎಂದು ಸಲಹೆ ನೀಡಿದರು.

ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು‌. ಇನ್ನೊಬ್ಬರನ್ನು ನೋಡಿ ಅವರಂತೆ ನಾವೂ ಬೇಗನೆ ಸಿರಿವಂತರಾಗಬೇಕು ದುರಾಸೆ ಹೊಂದಿರುವುದರಿಂದಲೇ ಪೊಲೀಸರೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಪೊಲೀಸರು ಮಾಡುವ ಅಪರಾಧ ಕ್ರಿಮಿನಲ್ ಪ್ರಕರಣಕ್ಕಿಂತಲೂ ದೊಡ್ಡದು ಎಂದರು.

ಪೊಲೀಸರು ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಏಳಿಗೆಗೆ ಸರಿದಾರಿಯಲ್ಲಿ ಸಾಗಬೇಕು. ದೈಹಿಕ ಸದೃಢತೆ, ಶಿಸ್ತು, ಸಮನ್ವಯತೆ ಹಾಗೂ ಜಾಗೃತಿಯ ಮನಸ್ಥಿತಿ ಪ್ರತಿ ಪೊಲೀಸರಲ್ಲಿಯೂ ಇರಲಿ. ನಿಮ್ಮ ಕೆಲಸ ಒತ್ತಡದ ನಡುವೆ ಕುಟುಂಬ ಹಾಗೂ ಮಕ್ಕಳ ಓದಿನ ಬಗ್ಗೆಯೂ ‌ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಕವಾಯತಿನ ಬಗ್ಗೆ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಬಳ್ಳಾರಿ ವಲಯದ ಐಜಿಪಿ ಬಿ. ಲೋಕೇಶ್ ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT