ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಲ್ಲದ ಊರಲ್ಲಿ ಮಸೀದಿ; ಹಿಂದೂಗಳಿಂದ ಸಂಭ್ರಮದ ಮೊಹರಂ ಆಚರಣೆ

Last Updated 17 ಆಗಸ್ಟ್ 2021, 3:18 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದಿದ್ದರೂ ಹಿಂದೂಗಳಿಂದ ಸಂಭ್ರಮದ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ.

ಮುರ್ಲಾಪುರ ಗ್ರಾಮ ಕೊಪ್ಪಳ ಜಿಲ್ಲೆಯ ಗಡಿ ಗ್ರಾಮವಾಗಿದ್ದು, ಸುಮಾರು 200 ಕುಟುಂಬಗಳು ವಾಸ ಮಾಡುತ್ತಿವೆ. ಸುಮಾರು 800 ಜನಸಂಖ್ಯೆ ಇದ್ದು, ಧಾರ್ಮಿಕ ಸಾಮರಸ್ಯ, ಜಾತ್ಯಾತೀತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಎಲ್ಲ ಗ್ರಾಮಸ್ಥರು ಹೊಂದಾಣಿಕೆಯ ಜೀವನ ನಡೆಸುತ್ತಿದ್ದಾರೆ.

ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಅದರೂ ಗ್ರಾಮದಲ್ಲಿ ಹಿಂದೂಗಳು ಶತ ಶತಮಾನಗಳಿಂದಲೂ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ. ಮೊಹರಂ ದಿನಗಳಲ್ಲಿ ಗ್ರಾಮಸ್ಥರು ಉಪವಾಸ ಮಾಡುವುದು, ದೇವರಿಗೆ ನೈವೇದ್ಯ ಸಲ್ಲಿಸುವುದನ್ನು ನಡೆಸಿಕೊಂಡು ಬಂದಿದ್ದಾರೆ.

ಈ ಮೊದಲು ಗ್ರಾಮಸ್ಥರು ತಗಡಿನ ಶೆಡ್ ನಿರ್ಮಿಸಿ ಅದರಲ್ಲಿ ಅಲಾಯಿ ದೇವರನ್ನು ಕೂರಿಸಿ ಮೊಹರಂ ಹಬ್ಬ ಆಚರಿಸುತ್ತಿದ್ದರು. 1992ರಲ್ಲಿ ಗ್ರಾಮದಲ್ಲಿ ನೂತನವಾಗಿ ಮಸೀದಿಯನ್ನು ಕಟ್ಟಲಾಗಿದೆ. ಅದರಲ್ಲಿ ಪ್ರತಿವರ್ಷ ಮೊಹರಂ ಆಚರಿಸಲಾಗುತ್ತದೆ. ಈ ಮಸೀದಿಯನ್ನು ಹಿಂದೂಗಳೇ ಕಟ್ಟಿರುವುದು ವಿಶೇಷವಾಗಿದೆ. ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕವಲೂರ ಗ್ರಾಮದ ಖಾಜಾ ಮೈನುದ್ದೀನ್ ಮಕಾಂದಾರ ಎಂಬುವವರು ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಿದ್ದಾರೆ. ಹಾಗೂ ವರ್ಷಪೂರ್ತಿ ಸಂಪೂರ್ಣ ಹೊಣೆಯನ್ನು ಮುರ್ಲಾಪುರ ಗ್ರಾಮದ ಹಿಂದೂ ಭಕ್ತ ಮಲ್ಲಪ್ಪ ಮೇಗಳಮನಿ ಹೊತ್ತಿದ್ದಾರೆ. ಎಲ್ಲ ಆಗು ಹೋಗುಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.

‘ಪ್ರಜಾವಾಣಿ’ ಪ್ರತಿನಿಧಿ ಜೊತೆ ಮಲ್ಲಪ್ಪ ಮೇಗಳಮನಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಯಾವುದೇ ಮುಸ್ಲಿಂ ಕುಟುಂಬ ವಾಸವಾಗಿಲ್ಲ. ಆದರೂ ಮೊಹರಂ ಹಬ್ಬವನ್ನು ಅಲಾಯಿ ದೇವರನ್ನು ಕೂರಿಸಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಇದಕ್ಕೆ ಗ್ರಾಮದ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.

ಖಾಜಾ ಮೈನುದ್ದೀನ್ ಮಕಾಂದಾರ ಮಾತನಾಡಿ, ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಹಾಗೂ ಒಗ್ಗಟ್ಟಿನಿಂದ ಆಚರಿಸುತ್ತಾರೆ. ಗ್ರಾಮ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT