ಗಂಗಾವತಿ: ಕುಮಾರಸ್ವಾಮಿಯಿಂದ ಸೈನಿಕರಿಗೆ ಅಪಮಾನ– ಮೋದಿ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
33 °C

ಗಂಗಾವತಿ: ಕುಮಾರಸ್ವಾಮಿಯಿಂದ ಸೈನಿಕರಿಗೆ ಅಪಮಾನ– ಮೋದಿ ವಾಗ್ದಾಳಿ

Published:
Updated:

ಕೊಪ್ಪಳ: ‘ಊಟಕ್ಕೆ ಇಲ್ಲದವರು ಸೇನೆ ಸೇರುತ್ತಾರೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಹೃದಯದಲ್ಲಿರುವುದನ್ನೇ ಹೇಳಿದ್ದೀರಿ. ಸೇನೆಗೆ ಅವರು ಅಪಮಾನ ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಜಿಲ್ಲೆಯ ಗಂಗಾವತಿ ಸಮೀಪದ ಕನಕಗಿರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. 

ಪೂಜ್ಯ ಗವಿಸಿದ್ಧೇಶ್ವರ ಸ್ವಾಮಿಗಳ ಚರಣಗಳಿಗೆ ಹಾಗೂ ಈ ಭೂಮಿಯಲ್ಲಿ ಜನಿಸಿದ್ದ ಮಹಾತ್ಮರಿಗೆ ನಮನ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ ಅವರು, ಪ್ರಕರ ಬಿಸಿಲಿನಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಅಭಿನಂದೆ ಸಲ್ಲಿಸಿದರು.

‘ದೇಶಸೇವೆಗೆ, ರಕ್ಷಣೆಗೆ ಎಲ್ಲಾ ತ್ಯಾಗಕ್ಕೂ ಸಿದ್ಧವಿರೋರು ಸೈನಿಕರು ಕನಿಷ್ಠ ತಾಪಮಾನದಲ್ಲೂ ಸೇವೆ ಸಲ್ಲಿಸುತ್ತಾರೆ. ತಿಂಗಳಾನುಗಟ್ಟಲೇ ಊಟ ಇಲ್ಲದಿದ್ದರೂ ತಿರಂಗ ಬಿಡುವುದಿಲ್ಲ. ಅಂತಹ ವೀರ ಸೈನಿಕರ ತಪಸ್ಸನ್ನೂ ನೀವೆಂದೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಮಾತು ತಪ್ಪಾಗಿ ಅರ್ಥೈಸಲಾಗಿದೆ ಎಂದು ಈಗ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ’ ಎಂದರು.

‘ದೇಶ ಮೊದಲು ಎನ್ನುವವರು ಹಾಗೂ ಕುಟುಂಬ ಮೊದಲು ಎನ್ನುವವರ ಮಧ್ಯೆ ಈ ಚುನಾವಣೆ ನಡೆಯುತ್ತಿದೆ’ ಎಂದು ಮೈತ್ರಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

‘ದೇವೇಗೌಡರ ಮಗ ಏನು ಹೇಳಿದ್ದಾರೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದಿದ್ದಾರೆ. ಆದರೆ, ಅವರು ಎಂದಾದರೂ ನಿಜ ಹೇಳಿದ್ದಾರೆಯೇ? ಅವರನ್ನು ಮಾತನ್ನು ನಂಬಲು ಸಾಧ್ಯವೇ ಇಲ್ಲ. ಈ ಹಿಂದೆಯೂ ಒಮ್ಮೆ ಮಾತು ತಪ್ಪಿದ್ದಾರೆ’ ಎಂದು ಟೀಕಿಸಿದರು.

‘ಮಗ ಅಷ್ಟೇ ಅಲ್ಲ ದೇವೇಗೌಡರೂ 2014ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬಂದರೆ, ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು. ಪಡೆದಿದ್ದಾರೆಯೇ? ಈ ವಿಚಾರ ಬಿಡಿ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್‌ ಕೊಡಿಸುವುದರಲ್ಲೇ ಮುಳುಗಿದ್ದಾರೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ’ ಎಂದರು.

‘ಕಾಂಗ್ರೆಸ್‌ ಅವರದು ಒಂದೇ ಮಿಷನ್‌, ಅದು ಕಮಿಷನ್‌. ಕಾಂಗ್ರೆಸ್‌ ಸರ್ಕಾರ ಇದ್ದಾಗ ಇಲ್ಲಿ 10 ಪರ್ಸೆಂಟ್‌ ಸರ್ಕಾರ ಆಗಿತ್ತು. ಈಗ ಅದಕ್ಕೆ ಮಿಸ್ಟರ್‌ 10 ಸೇರಿ ಕರ್ನಾಟಕದಲ್ಲಿ 20 ಪರ್ಸೆಂಟ್‌ ಸರ್ಕಾರ ಇದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೊಂಡು ಕೆಲವೇ ತಿಂಗಳುಗಳಾಗಿವೆ. ಆಗಲೇ ಕೋಟಿ ಕೋಟಿ ಹಣ ದೆಹಲಿಗೆ ಸಾಗಿಸಲಾಗುತ್ತಿದೆ’ ಎಂದು ಲೇವಡಿ ಮಾಡಿದರು.

‘ತುಂಗಭದ್ರಾ ಅಣೆಕಟ್ಟು ಇದ್ದರೂ ಹನಿ ನೀರಿಗೂ ನೀವು ಪರದಾಡುತ್ತಿದ್ದೀರಿ. ಇದಕ್ಕೆ ಕಾರಣ ಯಾರು? ಸಾಲಮನ್ನಾ ಸಹ ಸಂಪೂರ್ಣವಾಗಿಲ್ಲ. ಕೇಂದ್ರದ ಕಿಸಾನ್​ ಸಮ್ಮಾನ್​ ಯೋಜನೆಗೆ ರಾಜ್ಯ ಸರ್ಕಾರ ರೈತರ ಪಟ್ಟಿಯನ್ನೇ ನೀಡಿಲ್ಲ. ಮತ್ತೊಮ್ಮೆ ಮೋದಿ ಸರ್ಕಾರ ಬಂದಾಗ ಕರ್ನಾಟಕದ ಎಲ್ಲಾ ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಸಿಗಲಿದೆ.  60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಕೊಡಲು ನಿರ್ಧರಿಸಿದ್ದೇವೆ. ಇದರಿಂದ ಯಡಿಯೂರಪ್ಪನವರಿಗೂ ಖುಷಿಯಾಗಲಿದೆ. ಜೊತೆಗೆ ನೀರಿ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಜಲ ಆಯೋಗವನ್ನು ರಚಿಸುತ್ತೇವೆ’ ಎಂದು ಭರವಸೆ ನೀಡಿದರು.

‘ದೇಶದಲ್ಲಿ ಎಲ್ಲೇ ಹೋದರು ಮತ್ತೊಮ್ಮೆ ಮೋದಿ ಎನ್ನುವ ಕೂಗು ಕೇಳುತ್ತಿದೆ. ನಿಮ್ಮ ಈ ಪ್ರೀತಿ ದೆಹಲಿಯಲ್ಲಿ ಕುಳಿತಿರುವವರ ನಿದ್ದೆ ಗೆಡಿಸುತ್ತಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ಐದು ವರ್ಷಗಳಿಂದ ಪ್ರಧಾನಿ ನಿರಂತರವಾಗಿ ಒಂದು ದಿನ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೆ ನೀವು ನಮಗೆ ಸಮಯ ನೀಡಿ, ಬಿಜೆಪಿಗೆ ಹೆಚ್ಚು ಮತಗಳಿಕೆಗೆ ನೆರವಾಗಿ’ ಎಂದು ವಿನಂತಿಸಿದರು.

ನಿಮಗೆ ಅಗತ್ಯವಿರುವ ನೀರಾವರಿ ಸಮಸ್ಯೆಯನ್ನು ಬಿಜೆಪಿ ಬಗೆಹರಿಸಲಿದೆ. ಎಲ್ಲಾ ನದಿಗಳ ಜೋಡನೆ ಮಾಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಅವರು ಮಾಡಿರುವ ಘೋಷಣೆಯನ್ನು ತಪ್ಪದೆ ಜಾರಿತರುತ್ತಾರೆ. ಹಾಗಾಗಿ ಬಿಜೆಪಿಯನ್ನು ಗೆಲ್ಲಿಸಿಕೊಡಿ’ ಎಂದು ಕೋರಿದರು. 

ಕೊಪ್ಪಳ ಅಭ್ಯರ್ಥಿ ಸಂಗಣ್ಣ ಕರಡಿ, ಬಳ್ಳಾರಿ ಅಭ್ಯರ್ಥಿ ದೇವೇಂದ್ರಪ್ಪ ಹಾಗೂ ರಾಯಚೂರು (ಮೀಸಲು ಕ್ಷೇತ್ರ)ದಿಂದ ರಾಜಾ ಅಮರೇಶ್‌ ನಾಯ್ಕ್‌ ಪರವಾಗಿ ಮೋದಿ ಪ್ರಚಾರ ಮಾಡಿದರು.

ಹನುಮ ಮಾಲಾಧಾರೆ ಧರಿಸಿದ ಸಾಕಷ್ಟು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬೆಳ್ಳಿಯ ಗಧೆ ಹಾಗೂ ಅಂಜನಾದ್ರಿ ಬೆಟ್ಟದ ಸ್ಮರಣಿಕೆಯ ಕೊಡುಗೆಯನ್ನು ಮೋದಿ ನೀಡಲಾಯಿತು.  

 ಸಮಾವೇಶದ ವೇದಿಕೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಶ್ರೀರಾಮುಲು, ತಾರಾ ಸೇರಿದಂತೆ ಅನೇಕರು ಮುಖಂಡರು ಇದ್ದರು. 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 0

  Frustrated
 • 14

  Angry

Comments:

0 comments

Write the first review for this !