ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿ: ಹೊಸ ಭಾರತ ಸೃಷ್ಟಿ: ಪ್ರೊ.ಸಿದ್ದು.ಪಿ.ಅಲಗೂರ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-–2020 ವಿಚಾರ ಸಂಕಿರಣದಲ್ಲಿ ಸಿದ್ದು ಅಲಗೂರ ಅಭಿಮತ
Last Updated 10 ಅಕ್ಟೋಬರ್ 2021, 6:53 IST
ಅಕ್ಷರ ಗಾತ್ರ

ಕೊಪ್ಪಳ: ‘ದೇಶಭಕ್ತಿ, ಕೌಶಲ, ನೈತಿಕ ಅಡಿಪಾಯದ ಮೇಲೆ ರೂಪಿತವಾಗಿರುವ ಹೊಸ ಶಿಕ್ಷಣ ನೀತಿ ಹೊಸ ಭಾರತವನ್ನು ಸೃಷ್ಟಿಸಲಿದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು.ಪಿ.ಅಲಗೂರ ಅಭಿಪ್ರಾಯಪಟ್ಟರು.

ನಗರದ ಗವಿಸಿದ್ಧೇಶ್ವರ ಪದವಿಕಾಲೇಜಿನಲ್ಲಿ ಶನಿವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ- 2020’ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಣ ನೀತಿಯನ್ನು ರೂಪಿಸಿದ ತಂಡದಲ್ಲಿ ಕನ್ನಡ ನಾಡಿನ ಮೂವರು ತಜ್ಞರಿರುವುದು ನಮ್ಮ ರಾಜ್ಯದ ಹೆಮ್ಮೆ. ಪ್ರೊ.ಕಸ್ತೂರಿ ರಂಗನ್ ನೇತೃತ್ವದ ತಂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಈ ನೀತಿ ನಿರೂಪಿಸುವಲ್ಲಿ ಜಿಲ್ಲೆಯವರೇ ಆದ ಅಳವಂಡಿಯ ಪ್ರೊ.ತೇಜಸ್ವಿ ಕಟ್ಟಿಮನಿ ಅವರು ಇರುವುದು ನಮ್ಮ ಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಸಂದ ಗೌರವಾಗಿದೆ. ಅಲ್ಲದೆ ನಮ್ಮ ರಾಜ್ಯ ಈ ಹೊಸ ನೀತಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂದರು.

ಇದೇ ಶಿಕ್ಷಣ ನೀತಿಯ ಅನುಸಾರವಾಗಿಯೇ ಪ್ರವೇಶಾತಿ ಪ್ರಕ್ರಿಯೆ, ಶೈಕ್ಷಣಿಕ ಅವಧಿಯ ನಿಗದಿ, ಹೊಸ ಪಠ್ಯಕ್ರಮದ ಮಾದರಿಗಳು ಹಾಗೂ ಇನ್ನಿತರ ಚಟುವಟಿಕೆಗಳು ಸಾಗರೋಪಾದಿಯಲ್ಲಿ ಜರುಗುತ್ತಲಿವೆ. ಈ ಶಿಕ್ಷಣ ನೀತಿಯೂ ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ, ಮೌಲ್ಯ, ನೈತಿಕತೆ ಹಾಗೂ ವೈಚಾರಿಕತೆಯನ್ನು ನೀಡುವಲ್ಲಿ ಮತ್ತು ಶಿಕ್ಷಕರುಗಳಿಗೂ ಕಲಿಕೆಯ ಹೊಸ ಹೊಸ ವಿಧಾನಗಳನ್ನು ತಿಳಿದುಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದರು.

ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮುಂಬರುವ ದಿನಗಳಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಒಂದು ಉತ್ತಮ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸಬಹುದು ಎಂಬ ಆಶಯ ಹೊಂದಿದೆ. ಕೆಲವೇ ದಿನಗಳಲ್ಲಿ ಇದರ ಪರಿಣಾಮ ಅರಿವಾಗಲಿದೆ ಎಂದು ಅವರು
ಹೇಳಿದರು.

ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್.ಮರೆಗೌಡ್ರಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ,‘ಶಿಕ್ಷಣ ನಿಂತ ನೀರಾಗಿತ್ತು. ವಿದ್ಯಾರ್ಥಿಗಳಿಗೆ ಬೇರೆ ವಿಷಯ ಕಲಿಯಲು ಅವಕಾಶವೇ ಇದ್ದಿಲ್ಲ. ಸರ್ಕಾರ ನಿರ್ದಿಷ್ಟಪಡಿಸಿದ ವಿಷಯ ಆಯ್ಕೆ ಮಾಡಿಕೊಂಡು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿತ್ತು. ಹೊಸ ನೀತಿಯಿಂದ ಸಮಗ್ರ ಮತ್ತು ವಿಶಾಲವಾದ ತಳಹದಿಯ ಶಿಕ್ಷಣವನ್ನು ನೀಡಬಹುದಾಗಿದೆ ಎಂದರು. ವಿವಿಕುಲಸಚಿವ ಪ್ರೊ.ಎಸ್.ಸಿ.ಪಾಟೀಲ ಮಾತನಾಡಿ,‘ವಿದ್ಯಾರ್ಥಿಗಳು ಜತೆಗೆ ಶಿಕ್ಷಕರು ಕಲಿಯುವ ಗುಣವನ್ನು ರೂಢಿಸಿಕೊಳ್ಳಬೇಕು. ಶಿಕ್ಷಣವನ್ನು ಕಲಿಸುವ ಪದ್ಧತಿ ಬದಲಾಗುವ ಅಗತ್ಯ ಇತ್ತು. ಬದಲಾದ ಈ ಶಿಕ್ಷಣ ವ್ಯವಸ್ಥೆಗೆ ನಾವೆಲ್ಲ ಇಂದು ಹೊಂದಿಕೊಳ್ಳಬೇಕಿದೆ’ ಎಂದರು.

ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ್ ಪೂಜಾರ್ ಮತ್ತು ಕೃಷ್ಣದೇವರಾಯ, ವಿದ್ಯಾವಿಷಯಕ ಪರಿಷತ್ ಸದಸ್ಯರಾದ ದೊಡ್ಡನಗೌಡ.ಎಸ್.ತೋಟಗಟ್ಟಿ, ಡಾ.ಬಸವರಾಜ್ ಬೆಣ್ಣಿ, ಡಾ.ವೆಂಕಟಯ್ಯ ಸಿ ಇದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಚನ್ನಬಸವ ಸಾಹುಕಾರ ಅಧ್ಯಕ್ಷತೆ ವಹಿಸಿದ್ದರು. ವರ್ಷಿಣಿ ಸಂಕ್ಲಾಪುರ ಪ್ರಾರ್ಥಿಸಿದರು. ಪ್ರೊ.ಶರಣಬಸಪ್ಪ ಬಿಳಿಯಲಿಪ್ರಾಸ್ತಾವಿ ಕವಾಗಿ ಮಾತನಾಡಿದರು. ಡಾ.ನಾಗರಾಜ ದಂಡೋತಿ ವಂದಿಸಿದರು.ಪ್ರೊ ಅರುಣ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪದವಿ ವಿಭಾಗದ ಉಪನ್ಯಾಸಕರು, ವಿವಿಧ ಕಾಲೇಜಿನ ಪ್ರಾಚಾರ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT