ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ

Last Updated 5 ಫೆಬ್ರುವರಿ 2023, 6:00 IST
ಅಕ್ಷರ ಗಾತ್ರ

ಕೊಪ್ಪಳ: ‘ಕೊಪ್ಪಳದಲ್ಲಿ ಭೋವಿ ಜನಾಂಗಕ್ಕೆ ಸಮುದಾಯ ಭವನ ನಿರ್ಮಾಣ ಮಾಡುವಂತೆ ಸಮಾಜದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಜಮೀನು ಗುರುತಿಸಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ನಡೆದ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘12ನೇ ಶತಮಾನದಲ್ಲಿ ಅನೇಕ ಶಿವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಅಂತಹ ಮಹನೀಯರಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪುಗೊಂಡವರು ಸಿದ್ಧರಾಮೇಶ್ವರರು’ ಎಂದು ಸ್ಮರಿಸಿದರು.

‘ಸಿದ್ಧರಾಮೇಶ್ವರರು ಜಾತಿ, ಸಮುದಾಯಕ್ಕೆ ಸಿಮೀತವಾಗಿರದೆ ಮಾನವ ಕುಲಕ್ಕೆ ಆದರ್ಶವಾಗಿದ್ದರು. ಅವರ ಜೀವನ ಮೌಲ್ಯ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೋವಿ ಜನಾಂಗವು ಶ್ರಮಿಕ ವರ್ಗವಾಗಿದ್ದು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸ್ಥಾಪನೆಯಿಂದಾಗಿ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವಾಗಿದೆ. ನಿಗಮದಿಂದ ಸರ್ಕಾರದ ಹಲವಾರು ಸೌಲಭ್ಯಗಳಿದ್ದು, ಇವುಗಳ ಅನುಕೂಲ ಪಡೆದುಕೊಳ್ಳಬೇಕು’ ಎಂದರು.

ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ‘ಸಮುದಾಯ ಜೀವಾಳವಿದ್ದಂತೆ, ಕಾಯಕ ಎಂದರೆ ದೇವರು. ಅದನ್ನ ಸ್ಮರಿಸಿಕೂಂಡು ಬಂದಿರುವುದೆ ಭೋವಿ ಸಮಾಜ. ಮನೆ, ಮಠ, ಮಂದಿರ, ಮಹಲ್‌ಗಳನ್ನು ಕಟ್ಟಿದ ಭೋವಿ ಸಮಾಜವು ಎಲ್ಲರ ಮನಸ್ಸುಗಳನ್ನು ಕಟ್ಟಿದೆ. ಸಿದ್ದರಾಮೇಶ್ವರರು 64 ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಇಂತಹ ಮಹನೀಯರ ಬಗ್ಗೆ ನಾವು ಅರಿತುಕೊಳ್ಳುವುದು ಅಗತ್ಯ’ ಎಂದರು.

ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ ಎಸ್.ಶಿವಾನಂದ ಉಪನ್ಯಾಸ ನೀಡಿ ‘ಸಿದ್ಧರಾಮೇಶ್ವರರು ಬಸವಣ್ಣರವರನ್ನೇ ತಂದೆ, ತಾಯಿ, ಬಂದು, ಬಸವಾದಿ ಎಂದು ಸ್ಮರಿಸಿಕೊಂಡಿದ್ದರು. ಬಸವಣ್ಣನವರ ಆಶಯದಂತೆ ನಡೆದ ಸಿದ್ಧರಾಮೇಶ್ವರರು ಸಮಾಜದ ಏಕತೆಗಾಗಿ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್.ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ನಗರಸಭೆ ಸದಸ್ಯರಾದ ಅಕ್ಬರ್ ಪಾಶಾ ಹಾಗೂ ವಿರೂಪಾಕ್ಷಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ನಿಂಗಪ್ಪ ಎಚ್ ವಡ್ಡರ, ಬಸವರಾಜ ವೈ.ಭೋವಿ, ರಾಮಣ್ಣ ಎಚ್ ವಡ್ಡರ, ಗಾಳೆಪ್ಪ ಎಚ್ ಭೋವಿ, ವೆಂಕಟೇಶ ಕಂಪಸಾಗರ, ತಿಮ್ಮಣ್ಣ ಗುನ್ನಾಳ, ಪರಶುರಾಮ ತಾವರಗೇರಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT