ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಿಕಾ ವಿತರಕರ ದಿನ: ಸವಾಲಿನ ನಡುವೆಯೂ ಪತ್ರಿಕೆ ಹಂಚುವ ಪ್ರೀತಿ....

Published : 4 ಸೆಪ್ಟೆಂಬರ್ 2024, 5:05 IST
Last Updated : 4 ಸೆಪ್ಟೆಂಬರ್ 2024, 5:05 IST
ಫಾಲೋ ಮಾಡಿ
Comments

ಕೊಪ್ಪಳ: ‘ಪೂರ್ಣ ಕತ್ತಲು, ಬೀದಿದೀಪಗಳೇ ನಮ್ಮ ಓಡಾಟಕ್ಕೆ ಬೆಳಕು... ಚಳಿ, ಮಳೆ, ಗಾಳಿ ಲೆಕ್ಕಿಸದೇ ಕತ್ತಲು ಸರಿಯುವ ಮೊದಲೇ ಒಪ್ಪಟವಾಗಿ ಪತ್ರಿಕೆಗಳನ್ನು ಜೋಡಿಸಿಟ್ಟುಕೊಂಡು ನಮ್ಮ ಪಯಣ ಆರಂಭವಾಗುತ್ತದೆ. ಸೂರ್ಯೋದಯಕ್ಕೂ ಮೊದಲು ಓದುಗನ ಮನೆಗೆ ಪತ್ರಿಕೆ ತಲುಪಿಸಿದರೆ ಅದೇ ನಿರಾಳ ಭಾವ...‘

ಕಳೆದ 28 ವರ್ಷಗಳಿಂದ ನಿತ್ಯ ಪತ್ರಿಕೆ ಹಂಚುವ ಕಾಯಕದಲ್ಲಿ ತೊಡಗಿರುವ ಕೊಪ್ಪಳ ತಾಲ್ಲೂಕಿನ ಕಿನ್ನಾಳದ ಮಂಜುನಾಥ ಸಿರಿಗೇರಿ ಅವರ ಅನುಭವದ ಮಾತುಗಳು ಇವು.  ಇದೇ ರೀತಿಯ ಅನುಭವ ಎಲ್ಲ ಪತ್ರಿಕಾ ವಿತರಕರದ್ದು. ಜಿಲ್ಲೆಯಲ್ಲಿ ಅನೇಕ ಜನ ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಸೂರ್ಯನ ಕಿರಣ ನೆಲಕ್ಕೆ ಬೀಳುವ ಹೊತ್ತಿಗಾಗಲೇ ಪತ್ರಿಕೆ ತಲುಪಿಸಿ, ಅಂದಿನ ತಮ್ಮ ಕೆಲಸ ಮುಗಿಸುತ್ತಾರೆ.

ಎಲ್ಲರೂ ನಸುಕಿನ ಸುಖನಿದ್ರೆಯಲ್ಲಿರುವಾಗ ಪತ್ರಿಕಾ ವಿತರಕರ ಕೆಲಸ ಆರಂಭವಾಗುತ್ತದೆ. ಚಳಿ, ಮಳೆಯಲ್ಲಿಯೂ ವಿತರಕರ ಉತ್ಸಾಹ ಮಾತ್ರ ಎಂದಿಗೂ ಬತ್ತುವುದಿಲ್ಲ. ನಿತ್ಯವೂ ಕಾರ್ಯಕ್ಷಮತೆ ಉಳಿಸಿಕೊಂಡು ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ಬಹುತೇಕ ಓದುಗರ ಮುಖವನ್ನು ನೋಡಿರುವುದಿಲ್ಲ. ಹೀಗಾಗಿ ಪತ್ರಿಕೆ ಹಂಚುವ ಕಾಯಕಯೋಗಿಗಳು ಪತ್ರಿಕೆ ಹಾಗೂ ಓದುಗರ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಾರೆ.

ಮಣ್ಣಿನ ರಸ್ತೆ, ಪ್ರಾಣಿಗಳ ದಾಳಿಯ ಭೀತಿ, ಪತ್ರಿಕೆ ಹಂಚಲು ಹುಡುಗರ ಕೊರತೆ, ಜನ ಮನೆಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕಿದ್ದ ಕೋವಿಡ್‌ ದುರಿತ ಕಾಲದ ಸಂಕಷ್ಟದ ಸಂದರ್ಭದಲ್ಲಿಯೂ ಪತ್ರಿಕಾ ವಿತರಕರು ಹಿಂಜರಿಯದೇ ಮನೆಮನೆಗೆ ಪತ್ರಿಕೆ ತಲುಪಿಸಿದ್ದಾರೆ. ಸೋಂಕು ತಗುಲುವ ಭಯದಿಂದಾಗಿ ಜನಮನೆಯಲ್ಲಿ ಬೆಚ್ಚಗೆ ಇದ್ದಾಗ ಪತ್ರಿಕೆ ಹಂಚುವವರು ತಮ್ಮ ವೃತ್ತಿಬದ್ಧತೆ ಮೆರೆದಿದ್ದಾರೆ.

ಪತ್ರಿಕೆ ವಿತರಣೆ ಕಾಯಕವು, ಅನೇಕ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸಿದೆ. ವಿದ್ಯಾರ್ಥಿ ಹಂತದಲ್ಲಿ ಬೆಳಗಿನ ಜಾವ ಪತ್ರಿಕೆಗಳನ್ನು ಹಂಚಿ ಅದರಿಂದ ಬಂದ ಅಲ್ಪ ಆದಾಯವನ್ನೇ ಬಳಸಿಕೊಂಡು ಭವಿಷ್ಯ ರೂಪಿಸಿಕೊಂಡು ಪತ್ರಿಕೆಗಳನ್ನೂ ಬೆಳೆಸಿದ್ದಾರೆ. ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಿರುವ ಕಾಯಕಯೋಗಿಗಳ ಕಾರ್ಯ ನಿತ್ಯವೂ ನಡೆಯುತ್ತಿದೆ.

ಕೊಪ್ಪಳದಲ್ಲಿ ಪತ್ರಿಕೆಗಳನ್ನು ಜೋಡಿಸಿಕೊಳ್ಳುವಲ್ಲಿ ತಲ್ಲೀನರಾದ ಪತ್ರಿಕಾ ವಿತರಕರು
ಕೊಪ್ಪಳದಲ್ಲಿ ಪತ್ರಿಕೆಗಳನ್ನು ಜೋಡಿಸಿಕೊಳ್ಳುವಲ್ಲಿ ತಲ್ಲೀನರಾದ ಪತ್ರಿಕಾ ವಿತರಕರು
ಕೆಲಸ ಮಾಡಲು ಬಹಳಷ್ಟು ಜನ ಹಿಂದೇಟು ಹಾಕುತ್ತಿರುವ ಪತ್ರಿಕಾ ವಿತರಣೆ ಕಾರ್ಯವನ್ನು ಸ್ಪರ್ಧಾತ್ಮಕ ಸವಾಲಿನ ನಡುವೆಯೂ ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ. ಹಿಂದೆ ಸಂಚಾರ ವ್ಯವಸ್ಥೆ ಕೊರತೆಯಿಂದಾಗಿ ಪತ್ರಿಕೆ ಜನರಿಗೆ ತಡವಾಗಿ ತಲುಪುತ್ತಿತ್ತು. ಈಗ ಸೂರ್ಯೋದಯಕ್ಕೂ ಮೊದಲು ಮನೆ ಬಾಗಿಲಿಗೇ ಪತ್ರಿಕೆ ತಲುಪುತ್ತಿವೆ. ಎಲ್ಲರೂ ಪತ್ರಿಕೆ ಓದಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ.   
- ಮಂಜುನಾಥ ಸಿರಿಗೇರಿ, ಪತ್ರಿಕಾ ವಿತರಕ ಕಿನ್ನಾಳ
2 ವರ್ಷಗಳಿಂದ ಮನೆಮನೆಗೆ ತೆರಳಿ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಸರ್ಕಾರ ದ್ವಿಚಕ್ರ ವಾಹನ ಖರೀದಿಗೆ ಸರ್ಕಾರ ಸಬ್ಸಿಡಿ ನೀಡಬೇಕು. ಮಳೆ ಗಾಳಿ ಬಿಸಿಲು ಯಾವುದನ್ನೂ ಲೆಕ್ಕಿಸದೇ ಅತ್ಯಂತ ಖುಷಿಯಿಂದ ಈ ಕೆಲಸ ನಿರ್ವಹಣೆ ಮಾಡುತ್ತಿರುವೆ. ಪತ್ರಿಕೆ ಹಂಚುವ ಹುಡುಗರಿಗೆ ದ್ವಿಚಕ್ರವಾಹನದ ಅಗತ್ಯವಿದೆ. ಸಬ್ಸಿಡಿ ಕೊಟ್ಟರೆ ವಾಹನ ಖರೀದಿಗೆ ಅನುಕೂಲವಾಗುತ್ತದೆ.
- ಮಂಜುನಾಥ ಟಪಾಲ್, ಪತ್ರಿಕಾ ವಿತರಕರ ಸಂಘದ ಜಿಲ್ಲಾ ಉಪಾಧ್ಯಕ್ಷ
1 ಅನ್ನ ಕೊಟ್ಟ ವೃತ್ತಿ ಎರಡೂವರೆ ದಶಕಗಳಿಂದ ಮನೆಮನೆಗೆ ತೆರಳಿ ಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದೇನೆ. ಈ ವೃತ್ತಿ ಅನ್ನ ಕೊಟ್ಟಿದೆ. ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಸೂರ್ಯೋದಯಕ್ಕೂ ಮೊದಲೇ ಕೆಲಸ ಮುಗಿಯುತ್ತದೆ. ಬೇರೆ ಕೆಲಸ ಮಾಡಲು ಕೂಡ ಅನುಕೂಲವಾಗುತ್ತದೆ
- ಬಸವರಾಜ ಬಾಳಪ್ಪ ಭಂಡಾರಿ, ಮುರಡಿ ಪ‍ತ್ರಿಕಾ ವಿತರಕ
ಕೆಲಸ ಮೂರು ವರ್ಷಗಳಿಂದ ಪತ್ರಿಕೆ ಹಂಚುತ್ತಿದ್ದೇನೆ. ಒಂದೆಡೆ ಇದು ಕೆಲಸವಾದರೆ ಇನ್ನೊಂದೆಡೆ ಆರೋಗ್ಯ ಉತ್ತಮಪಡಿಸಿಕೊಳ್ಳಲು ಬೆಳಗಿನ ಜಾವವೇ ನಿದ್ದೆಯಿಂದ ಏಳುವುದನ್ನು ರೂಢಿಸಿಕೊಳ್ಳಲು ವೇದಿಕೆ. ಪತ್ರಿಕೆಗಳನ್ನು ಓದುವ ಆಸಕ್ತಿಯಿರುವ ಕಾರಣ ನಿತ್ಯ ಜನರಿಗೆ ಪತ್ರಿಕೆ ತಲುಪುವ ಮೊದಲು ನಾನು ಓದುತ್ತೇನೆ. 
ಜಗನ್ನಾಥ ಶಂಕರಪ್ಪ ಅಕ್ಕಸಾಲಿ, ಮುಧೋಳ ಪತ್ರಿಕಾ ವಿತರಕ
ಅನೇಕ ಸಮಸ್ಯೆಗಳು ಹಾಗೂ ಸವಾಲುಗಳ ನಡುವೆಯೂ ಪತ್ರಿಕೆ ವಿತರಣೆ ಕೆಲಸ ಮಾಡುತ್ತಿದ್ದೇವೆ. ಹಲವು ಬಾರಿ ವೈಯಕ್ತಿಕವಾಗಿ ಸಂಕಷ್ಟಗಳು ತಲೆದೋರಿದರೂ ನಮ್ಮ ವೃತ್ತಿ ಬದ್ಧತೆ ಬಿಡುವುದಿಲ್ಲ. ಪತ್ರಿಕೆ ವಿತರಣೆ ವೃತ್ತಿಯನ್ನೇ ಹಲವಾರು ಕುಟುಂಬಗಳು ನೆಚ್ಚಿಕೊಂಡಿವೆ. ಅವರೆಲ್ಲರಿಗಾಗಿ ಸರ್ಕಾರ ಮೂಲ ಅಗತ್ಯತೆಗಳ ನೆರವು ಘೋಷಿಸಲಿ. ಪಿಂಚಣಿಯನ್ನಾದರೂ ನೀಡಲಿ.
- ಗವಿರಾಜ ಕಂದಾರಿ, ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ
ಎಲ್ಲ ವೃತ್ತಿಗಳಲ್ಲಿ ಇರುವಂತೆ ಪತ್ರಿಕೆ ಹಂಚುವ ಕಾಯಕದ ಕೆಲಸದಲ್ಲಿಯೂ ಏರಿಳಿತಗಳು ಇದ್ದೇ ಇವೆ. ಮೂರ್ನಾಲ್ಕು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು ಖುಷಿ ನೀಡಿದೆ. ಸೂರ್ಯೋದಯಕ್ಕೂ ಮೊದಲು ಎದ್ದು ಪತ್ರಿಕೆ ಜೋಡಿಸಿಕೊಂಡು ಮನೆಮನೆಗೆ ತಲುಪುವ ಕೆಲಸ ಆತ್ಮತೃಪ್ತಿ ನೀಡಿದೆ.     
ಮಹಾಂತೇಶ ವಣಗೇರಿ, ಪತ್ರಿಕಾ ವಿತರಕ ಕಾರಟಗಿ

ಪತ್ರಿಕಾ ವಿತರಕರ ಬೇಡಿಕೆಗಳೇನು?

  • ದ್ವಿಚಕ್ರ ವಾಹನ ಖರೀದಿಗೆ ಸರ್ಕಾರ ಸಬ್ಸಿಡಿ ನೀಡಬೇಕು.

  • ಸರ್ಕಾರದ ನಾಲ್ಕನೇ ಅಂಗದ ಭಾಗವಾದ ಪತ್ರಿಕಾ ವಿತರಕರಿಗೆ ಬ್ಯಾಂಕ್‌ಗಳಲ್ಲಿ ಸಾಲ ಒದಗಿಸಬೇಕು.

  • ಪತ್ರಿಕೆ ಹಂಚುವ ಸಮಯದಲ್ಲಿ ಬೀದಿನಾಯಿಗಳ ದಾಳಿ ಎದುರಿಸಬೇಕಾಗುತ್ತದೆ. ಇಂಥ ಅಪಾಯಕಾರಿ ಸಂದರ್ಭಕ್ಕೆ ತುತ್ತಾದರೆ ಸರ್ಕಾರ ಉಚಿತವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.

  • ವಿತರಕರಿಗೆ ಗುರುತಿನ ಚೀಟಿ ನೀಡಬೇಕು.

  • ಸರ್ಕಾರ ಆರೋಗ್ಯ ವಿಮೆ ಒದಗಿಸಬೇಕು.

  • ವಿತರಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಬೇಕು.

  • ಪತ್ರಿಕೆಗಳನ್ನು ಮಟ್ಟಸವಾಗಿ ಜೋಡಿಸಿಕೊಳ್ಳಲು ಸ್ಥಳೀಯ ಆಡಳಿತ ಒಂದೆಡೆ ಸ್ಥಳದ ಅವಕಾಶ ಒದಗಿಸಿಕೊಡಬೇಕು.

  • ಪತ್ರಿಕೆ ಹಂಚುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು. ಅಂಥವರ ಬದುಕಿಗೆ ಸರ್ಕಾರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು.

  • ಗುಂಪು ವಿಮೆ ಸೌಲಭ್ಯ ಕೊಡಬೇಕು.

  • ಅಂಗವಿಕಲ ಪತ್ರಿಕಾ ವಿತರಕರಿಗೆ ತ್ರಿಚಕ್ರ ವಾಹನ ಸೌಲಭ್ಯ ಒದಗಿಸಬೇಕು. ಇದರಿಂದ ಸ್ವಾವಲಂಬಿ ಬದುಕಿಗೂ ಅನುಕೂಲವಾಗುತ್ತದೆ.

  • ಬೀದಿಬದಿ ವ್ಯಾಪಾರಿಗಳಿಗೆ ನೀಡುವಂತೆ ವಿತರಕರಿಗೂ ಸಾಲ ಒದಗಿಸಿಕೊಡಬೇಕು

  • ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್ ಪಾಸ್‌ ಸೌಲಭ್ಯ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT