ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಹಸುಗಳ ದಾಹ ತಣಿಸಿದ ನರೇಗಾ ಕೃಷಿಹೊಂಡ

ರೈತ ಮಹಿಳೆ ಮುದಕಮ್ಮನ ಜೀವನ ಬದಲಿಸಿದ ನರೇಗಾ ಯೋಜನೆ
Last Updated 6 ಆಗಸ್ಟ್ 2021, 14:22 IST
ಅಕ್ಷರ ಗಾತ್ರ

ಕುಕನೂರು: ಇಲ್ಲಿನ ಮಂಗಳೂರು ಗ್ರಾಮದ ರೈತ ಮಹಿಳೆ ಮುದಕಮ್ಮ ಎಮ್ಮಿ ಅವರ ಜಮೀನಿನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ನಿತ್ಯ ಜಾನುವಾರುಗಳ ದಾಹ ಇಂಗಿಸುತ್ತಿದೆ.

‘ಓಡುವ ನೀರನ್ನು ನಿಲ್ಲುವಂತೆ ಮಾಡಿ, ನಿಂತ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡಿ’ ಎಂಬ ಧ್ಯೆಯವಾಕ್ಯದಡಿ ಸರ್ಕಾರ ನರೇಗಾ ಯೋಜನೆಯಡಿ ಭೂಮಿಗೆ ಬೀಳುವ ನೀರನ್ನು ಜಮೀನಿನಲ್ಲಿ ನಿಲ್ಲುವಂತೆ ಮಾಡಲು ಕೆರೆ, ನಾಲಾ, ಬದು, ಬೋಲ್ಡರ್ ಚಕ್ ಮುಂತಾದ ಕಾಮಗಾರಿಗಳನ್ನು ಮಾಡಿ ಮಳೆ ನೀರನ್ನು ತಡೆಯುವಂತೆ ಮಾಡುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವುದರ ಜತೆಗೆ ಈಗ ದನಕರುಗಳಿಗೆ, ಜಾನುವಾರುಗಳಿಗೆ ಪ್ರಾಣಿ- ಪಕ್ಷಿಗಳಿಗೆ ಕುಡಿಯಲು ನೀರು ಸಿಗುವಂತಾಗಿದೆ.

ತಾಲ್ಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಮಹಿಳೆ ಮುದಕಮ್ಮ ಮುದಕಪ್ಪ ಎಮ್ಮಿ ಅವರ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಕೃಷಿಹೊಂಡದಲ್ಲಿ ಲಕ್ಷಾಂತರ ಲೀಟರ್ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ಇಲ್ಲಿನ ನೀರು ಜಾನುವಾರುಗಳ ದಾಹ ತಣಿಸುತ್ತಿದೆ.

ಮುದಕಮ್ಮ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಅಲ್ಲಿನ ಪಿಡಿಒ ಅವರು ತಮ್ಮ ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿಕೊಳ್ಳಲು ಸಲಹೆ ನೀಡಿದರು. ಅದರಂತೆ ಅವರು ತಮ್ಮ ಜಮೀನಿನ ಮೂಲೆಯಲ್ಲಿ 40*40 ಅಳತೆಯ 10 ಅಡಿ ಆಳದಲ್ಲಿ 135 ಮಾನವ ದಿನಗಳನ್ನು ಸೃಜಿಸಿ ₹ 39,015 ಕೂಲಿ ಮೊತ್ತದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ನರೇಗಾದಿಂದ ಬಂದ ಹಣದಲ್ಲೇ ಈ ಬಾರಿ ಕೃಷಿ ಚಟುವಟಿಕೆಗೆ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಇಷ್ಟು ದಿನ ಅವರ ಜಮೀನಿನಲ್ಲಿ ಬೀಳುವ ಮಳೆ ನೀರು ಹಳ್ಳ ಸೇರುತ್ತಿತ್ತು. ಆದರೆ, ಈಗ ಎಲ್ಲ ನೀರು ಕೃಷಿಹೊಂಡದಲ್ಲಿ ಸಂಗ್ರಹವಾಗುತ್ತಿದೆ. ಈ ಮೊದಲು ಮಳೆ ಕಡಿಮೆಯಾದರೆ ಬೆಳೆ ಒಣಗುತ್ತಿತ್ತು. ಆದರೆ, ಈಗ ಅವರ ಜಮೀನಿನಲ್ಲಿ ನೀರು ನಿಂತಿರುವುದರಿಂದ ಬೆಳೆ ಉತ್ತಮವಾಗಿ ಬೆಳೆದಿದೆ. ಇದರಿಂದಾಗಿ ರೈತರ ಮುಖದಲ್ಲಿ ಸಂತಸ ತಂದಿದೆ. ಹಾಗೇ ಅವರ ಜಮೀನಿನಲ್ಲಿರುವ ಕೊಳವೆಬಾವಿಯ ಅಂತರ್ಜಲಮಟ್ಟವರೂ ಹೆಚ್ಚಳವಾಗಿದೆ.

‘ನರೇಗಾ ಯೋಜನೆಯಡಿ ನಮ್ಮ ಜಮೀನಿನಲ್ಲಿ ಎರಡು ತಿಂಗಳ ಹಿಂದೆ ಕೃಷಿಹೊಂಡ ನಿರ್ಮಿಸಿಕೊಳ್ಳಲಾಗಿತ್ತು. ಜಮೀನಿನ ನೀರು ನೇರವಾಗಿ ಕೃಷಿಹೊಂಡಕ್ಕೆ ಬಂದು ನಿಂತಿದೆ. ಇದರಿಂದ ನಮ್ಮ ಜಮೀನಿನ ಮಣ್ಣಿನ ಸವಕಳಿ ಕಡಿಮೆಯಾಗಿದೆ. ನಮ್ಮ ಹಾಗೂ ಸುತ್ತಮುತ್ತಲಿನ ರೈತರ ದನಕರುಗಳಿಗೆ ನೀರು ಸಿಕ್ಕಂತಾಗಿದೆ‘ ಎನ್ನುತ್ತಾರೆ ಮುದಕಮ್ಮ ಅವರ ಮಗ ಶರಣಪ್ಪ ಎಮ್ಮಿ.

‘ನರೇಗಾದಿಂದ ಬಂದ ಹಣವನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲ ಸೌಲಭ್ಯಗಳು ಸಿಗುವಂತೆ ಮಾಡಿರುವ ಗ್ರಾಮ ಪಂಚಾಯಿತಿಯವರಿಗೆ ಹಾಗೂ ನರೇಗಾ ಯೋಜನೆಯ ಖುಣವನ್ನು ಯಾವತ್ತು ಮರೆಯಲ್ಲ’ ಎನ್ನುತ್ತಾರೆ ಶರಣಪ್ಪ ಎಮ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT