ಸೋಮವಾರ, ಜುಲೈ 26, 2021
26 °C
ಮೇಲ್ಸೇತುವೆ ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ಹೆದ್ದಾರಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಕೇಂದ್ರ ಸರ್ಕಾರ ಈ ಭಾಗದ ಸಂಪರ್ಕ ರಸ್ತೆಗಳ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡುತ್ತಿದೆ. ಇದರಿಂದ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ ಸ್ವಾತಂತ್ರ್ಯ ಸೇನಾನಿ ದಿ.ಪುಂಡಲೀಕಪ್ಪ ಜ್ಞಾನಮೋಟೆ ಹೆಸರಿನ ಮೇಲ್ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮೇಲ್ಸೇತುವೆ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿತ್ತು. ಆದರೂ ಸೇತುವೆ ನಿಮಾಣಗೊಂಡಿರಲಿಲ್ಲ. ಸಂಸದ ಸಂಗಣ್ಣ ಕರಡಿ ಅವರ ಪ್ರಯತ್ನದಿಂದ ಕೇಂದ್ರ ಸರ್ಕಾರ ₹ 68.2 ಕೋಟಿ ವೆಚ್ಚದ ಈ ಕಾಮಗಾರಿಗೆ ಮಂಜೂರಾತಿ ನೀಡಿತ್ತು. ಈಗ ಮೇಲ್ಸೇತುವೆ ಗುಣಮಟ್ಟದ ಕಾಮಗಾರಿಯಾಗಿ ನಿರ್ಮಾಣಗೊಂಡಿರುವುದು ಜನರಿಗೆ ಸಂತಸ ತಂದಿದೆ‘ ಎಂದರು.

 ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಮೇಲ್ಸೇತುವೆಯಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸರ್ಕಾರ ಲಾಕ್‌ಡೌನ್‌ ಮಾತ್ರ ಸಡಿಲಿಸಿದೆ. ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕೆಲ ವಾರಗಳ ಹಿಂದೆ ಹಸಿರು ವಲಯದಲ್ಲಿದ್ದ ಕೊಪ್ಪಳ ಜಿಲ್ಲೆಯಲ್ಲಿ ಈಗ 21 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ವಿಷಯದಲ್ಲಿ ಜನರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸುರಕ್ಷತೆಗೆ ಹೆಚ್ಚು ಗಮನಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ‘ಮೇಲ್ಸೇತುವೆ ನಿರ್ಮಿಸುವ ಮೂಲಕ ಚತುಷ್ಪಥ ಹೆದ್ದಾರಿಯ ಸುಗಮ ಸಂಚಾರ ವ್ಯವಸ್ಥೆಗೆ ಬಹಳಷ್ಟು ಉಪಯುಕ್ತವಾಗಿದೆ‘ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ ಇಲ್ಲಿ ಮೇಲ್ಸೇತುವೆ ಇಲ್ಲದ ಕಾರಣಕ್ಕೆ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ನಡೆದಿವೆ. ಈಗ ಎಲ್ಲರಿಗೂ ಅನುಕೂಲವಾಗಲಿದೆ. ಅಲ್ಲದೆ 3 ಕಿಮೀ ಸರ್ವಿಸ್ ರಸ್ತೆ ನಿರ್ಮಿಸುವುದು, ಚರಂಡಿ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೂ ಗಮನಹರಿಸಬೇಕು ಎಂದರು.

ಶಾಸಕರಾದ ಪರಣ್ಣ ಮನವಳ್ಳಿ, ಹಾಲಪ್ಪ ಆಚಾರ, ಬಸವರಾಜ ಧಡೇಸಗೂರು, ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಸದಸ್ಯ ಕೆ.ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಜಿಲ್ಲಾಧಿಕಾರಿ ಪಿ.ಸುನಿಲಕುಮಾರ್, ತಹಶೀಲ್ದಾರ್ ಎಂ.ಸಿದ್ದೇಶ್‌, ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಸಿಪಿಐ ಜಿ.ಚಂದ್ರಶೇಖರ, ಸುರೇಶ ತಳವಾರ, ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಅನೇಕ ಪ್ರಮುಖರು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ಪ್ರಮುಖರಿಗೆ ಸನ್ಮಾನ 

ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಜನಪರ ಚಳವಳಿ ನಡೆಸಿದ್ದ ಅನೇಕ ಪ್ರಮುಖರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಮೇಲ್ಸೇತುವೆ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಹೇಳಿದ್ದ ಹೋರಾಟಗಾರರಲ್ಲಿ ಒಬ್ಬರಾಗಿದ್ದ ಉಮೇಶ ಮಂಗಳೂರು ಕೂಡ ಸನ್ಮಾನಕ್ಕೆ ಒಳಗಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.