ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಯುವಕರ ಆಕ್ರೋಶ, ಪೊಲೀಸರಿಂದ ಲಾಟಿ ಏಟು

ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನಿಸಿದ ಆರೋಪ
Published 11 ಏಪ್ರಿಲ್ 2024, 7:51 IST
Last Updated 11 ಏಪ್ರಿಲ್ 2024, 7:51 IST
ಅಕ್ಷರ ಗಾತ್ರ

ಕುಷ್ಟಗಿ: ಬೈಕ್‌ ನಂಬರ್‌ ಪ್ಲೇಟ್‌ ಮೇಲೆ ಚಿತ್ರಿಸಲಾಗದ್ದ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಅವಮಾನಿಸಿದ್ದಕ್ಕೆ ಸಂಬಂಧಿಸಿದಂತೆ ರೊಚ್ಚಿಗೆದ್ದ ಪಟ್ಟಣದ ಕೆಲ ಯುವಕರು ಇನ್ನೊಂದು ಸಮುದಾಯದ ಯುವಕನನ್ನಥಳಿಸಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.

ಮಲ್ಲಯ್ಯ ವೃತ್ತದ ಬಳಿ ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಎರಡು ಸಮುದಾಯಗಳ ಬಹಳಷ್ಟು ಯುವಕರು ಜಮಾಯಿಸಿ ವಾಗ್ವಾದಕ್ಕಿಳಿದಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು. ವಿಷಯ ತಿಳಿದು ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ ಮತ್ತು ಸಿಬ್ಬಂದಿ ಯುವಕನೊಬ್ಬನನ್ನು ವಶಕ್ಕೆ ಪಡೆದು ನಂತರ ಸ್ಥಳದಲ್ಲಿದ್ದ ಇತರೆ ಯುವಕರನ್ನು ಚದುರಿಸಿ ಎರಡು ಸಮುದಾಯಗಳ ನಡುವೆ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದರು. 

ಆಗಿದ್ದೇನು: ಮಂಗಳವಾರ ನಡೆದ ಘಟನೆಯಲ್ಲಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ಯುವಕರ ಮಧ್ಯೆ ಹಳೆಯ ಕಾರಣಕ್ಕೆ ಗಲಾಟೆ ನಡೆದಿತ್ತು. ನಂತರ ಕೆಲ ಹಿರಿಯರು ಜಗಳ ಬಿಡಿಸಿದ್ದರು. ಈ ಸಂದರ್ಭದಲ್ಲಿ ಯುವಕನೊಬ್ಬ ಸ್ಥಳದಲ್ಲಿದ್ದ ಬೈಕ್‌ನ ನಂಬರ್‌ ಪ್ಲೇಟ್‌ಗೆ ಒದ್ದು ಅದನ್ನು ಅವಮಾನಿಸಿದ್ದ ಎನ್ನಲಾಗಿದೆ.

ಬೈಕ್‌ ಅನ್ನು ಬುಧವಾರ ಬೆಳಿಗ್ಗೆ ರೇಣುಕಾಚಾರ್ಯ ಮಂಗಳ ಭವನದ ಬಳಿ ಬಂದ ಪಟ್ಟಣದ ಕೆಲ ಯುವಕರು ರೊಚ್ಚಿಗೆದ್ದು ಯುವಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಒದ್ದು ಅವಮಾನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಯುವಕನನ್ನು ತರಾಟೆಗೆ ತೆಗೆದುಕೊಂಡಾಗ ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು.

ನಂತರ ಕನಕದಾಸ ವೃತ್ತದ ಬಳಿ ಜಮಾಯಿಸಿದ ಮತ್ತಷ್ಟು ಜನರು ಭಾವಚಿತ್ರಕ್ಕೆ ಅವಮಾನ ಮಾಡಿದ ಯುವಕನನ್ನು ಸ್ಥಳಕ್ಕೆ ಕರೆಯಿಸಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಬಂದ ಯುವಕ ತಪ್ಪಾಗಿದೆ ಎಂದು ಜನರ ಎದುರು ಕೈಜೋಡಿಸಿದ್ದಾನೆ. ಅಲ್ಲದೆ ಅದೇ ಯುವಕನಿಂದ ಸ್ಥಳದಲ್ಲಿರುವ ಕನಕದಾಸ ಪುತ್ಥಳಿಗೆ ಹೂವಿನಮಾಲೆ ಹಾಕಿಸಿದ್ದಾರೆ.

ನಂತರ ಯುವಕನನ್ನು ರಕ್ಷಿಸಲು ಸಬ್‌ ಇನ್‌ಸ್ಪೆಕ್ಟರ್‌ ಮುದ್ದುರಂಗಸ್ವಾಮಿ ತಮ್ಮ ವಾಹನದಲ್ಲಿ ಕರೆದೊಯ್ಯುವಾಗ ಯುವಕರ ಗುಂಪು ಯುವಕನನ್ನು ಥಳಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಆದರೆ ಗಲಾಟೆಯಲ್ಲಿ ಭಾಗಿಯಾಗಿದ್ದ ಇಬ್ಬರೂ ಯುವಕರು ಅಪ್ರಾಪ್ತರಾಗಿದ್ದು ಸಂಘರ್ಷಕ್ಕೊಳಗಾದ ಯುವಕರು ಎಂದು ಪರಿಗಣಿಸಿ ಮಕ್ಕಳ ರಕ್ಷಣಾ ಸಮಿತಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಯುವಕರನ್ನು ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಸಬ್‌ ಇನ್‌ಸ್ಪೆಕ್ಟರ್ ಮುದ್ದುರಂಗಸ್ವಾಮಿ ವಿವರಿಸಿದರು.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸಿಪಿಐ ಯಶವಂತ ಬಿಸನಳ್ಳಿ, ಘಟನೆಗೆ ಸಂಬಂಧಿಸಿದಂತೆ ಯಾರೂ ದೂರು ನೀಡಿಲ್ಲ, ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT