ಶನಿವಾರ, ಜನವರಿ 18, 2020
20 °C
ಪೌರತ್ವ (ತಿದ್ದುಪಡಿ) ಕಾಯ್ದೆ

ಗಲಭೆ ಸೃಷ್ಟಿಸುವುದು ಕಾಂಗ್ರೆಸ್‌ ಕೆಲಸ: ಶಾಸಕ ಪಿ.ರಾಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ‘ಅಶಾಂತಿ, ಗಲಭೆ ಸೃಷ್ಟಿಸುವುದು ಕಾಂಗ್ರೆಸ್‌ ಪಕ್ಷದ ಕೆಲಸ’ ಎಂದು ರಾಜ್ಯ ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ ಆರೋಪಿಸಿದರು.

ಇಲ್ಲಿನ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಬಿಜೆಪಿಯ ಮಂಡಲ ಘಟಕ ಭಾನುವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಎಂದರೆ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷದವರಿಗೆ ಅಧಿಕಾರ, ಸುಖ, ವೈಭೋಗದ ಜೀವನ ಅನುಭವಿಸುವುದಾಗಿದೆ. ಅವರಿಗೆ ದೇಶಾಭಿಮಾನ ಇಲ್ಲ, ಬಿಜೆಪಿಯವರಿಗೆ ದೇಶ ಎಂದರೆ ಕರ್ಮ, ಪುಣ್ಯಭೂಮಿಯಾಗಿದೆ ಎಂದು ತಿಳಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಮುಸ್ಲಿಂರಿಗೆ ಅನ್ಯಾಯವಾಗುವುದಿಲ್ಲ. ಕಾನೂನು ಜಾರಿಗೆ ತರುವ ಮೂಲಕ ಬಿಜೆಪಿಯವರು ಮುಸ್ಲಿಂ ಸಮಾಜದವರ ಆಸ್ತಿ, ಅಂತಸ್ತು ಕಸಿದುಕೊಂಡು ಪಾಕಿಸ್ತಾನಕ್ಕೆ ಕಳಿಸುತ್ತಾರೆ ಎಂದು ಕಾಂಗ್ರೆಸ್‌ ಅಪಪ್ರಚಾರ ನಡೆಸುತ್ತಿದೆ ಎಂದರು.

‘ದೇಶದಲ್ಲಿ ಎನ್‌ಆರ್‌ಸಿ ತರುವ ಪ್ರಸ್ತಾವ ಇಲ್ಲ. ಈ ಹಿಂದೆ ಆಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್‌ ಇದನ್ನು ತಂದಿದೆ. ಇದು ತಪ್ಪಲ್ಲ’ ಎಂದು ಹೇಳಿದರು.

ಮುಸ್ಲಿಂರ ಪೌರತ್ವವನ್ನು ಕಸಿದುಕೊಳ್ಳುವ ಅಧಿಕಾರ ಸಂವಿಧಾನ, ನ್ಯಾಯಾಂಗಕ್ಕೂ ಇಲ್ಲ. ಜನನದ ಮೂಲಕ ಅವರು ಈ ದೇಶದ ಪೌರರಾಗಿದ್ದಾರೆ ಎಂದರು.

ದೇಶದ ಸುಭದ್ರತೆಗಾಗಿ ಪೌರತ್ವ ತಿದ್ದುಪಡಿ ಕಾನೂನು ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಅವರು ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸುತ್ತಿದ್ದಾರೆ. ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು.

ಶಾಸಕ ಬಸವರಾಜ ದಢೇಸೂಗೂರ ಮಾತನಾಡಿ,‘ಅಮಾಯಕರ ಕೈಯಲ್ಲಿ ಕಲ್ಲು ಕೊಟ್ಟು ಅಶಾಂತಿ ಕದಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸಲ್ಲದ ಕಾರಣ ಹುಡುಕಿ ಜಗಳ ಹಚ್ಚಿ ಅಧಿಕಾರ ಗಿಟ್ಟಿಸಿಕೊಳ್ಳುವುದು ಕಾಂಗ್ರೆಸ್ ನೀತಿ ಎಂದು’ ಛೇಡಿಸಿದರು.

ಕಾಂಗ್ರೆಸ್‌ನವರು ಬ್ರಿಟಿಷರಿದ್ದಂತೆ ಒಡೆದು ಆಳುವ ನೀತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಬಿಜೆಪಿಯವರು ಭಾರತ ಮಾತೆಗೆ ಜೈಕಾರ ಹಾಕಿದರೆ ಕಾಂಗ್ರೆಸ್‌ನವರು ಇಂದಿರಾಗಾಂಧಿ ಅವರಿಗೆ ಜೈ ಎನ್ನುತ್ತಾರೆ, 20 ವರ್ಷವಾದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮಂಡಳ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿದರು.

ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಪರಸಪ್ಪ ರಾಠೋಡ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ, ದೊಡ್ಡಯ್ಯ ಅರವಟಗಿಮಠ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಡಗೇರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ಪ್ರಮುಖರಾದ ವಿರೂಪಾಕ್ಷಪ್ಪ ಭತ್ತದ, ತಿಪ್ಪೇರುದ್ರಸ್ವಾಮಿ, ನವೀನ ಗುಳಗಣ್ಣನವರ್, ಚಂದ್ರಶೇಖರ ಪಾಟೀಲ ಹಲಗೇರಿ, ಪಾಂಡುರಂಗ ರಾಠೋಡ್, ಬಸನಗೌಡ ಆದಾಪುರ, ನಿರುಪಾದಿ ಮಕಾಸಿ, ಶರತ್ ನಾಯಕ, ಅಶ್ವಿನಿ ದೇಸಾಯಿ ಹಾಗೂ ವಾಗೀಶ ಹಿರೇಮಠ ಇದ್ದರು.

ಬಂಜಾರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ರಾಜೀವ ಅವರು ಕೆಲ ಸಮಯ ಲಂಬಾಣಿ ಭಾಷೆಯಲ್ಲಿ ಮಾತನಾಡಿ ಗಮನ ಸೆಳೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು