ಬುಧವಾರ, ಜನವರಿ 20, 2021
26 °C
ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆ ಜನ ಜಾಗೃತಿ ಸಭೆಯಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜ. 14 ರಂದು ಕೂಡಲ ಸಂಗಮ ಪೀಠದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು. ಬಳಿಕ ತೀಕ್ಷ್ಣ ಸ್ವರೂಪದ ಹೋರಾಟ ರೂಪಿಸುವ ಕುರಿತು ನಿರ್ಧರಿಸಲಾಗುವುದು ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆ ಜನ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೀಸಲಾತಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಒಳ್ಳೆಯದಾಗಲಿದೆ.‌ ರಾಜ್ಯದಲ್ಲಿ ನಮ್ಮ ಸಮುದಾಯ ಪ್ರಬಲವಾಗಿದ್ದರೂ ನಮ್ಮ ಹಕ್ಕನ್ನು ನಾವು ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಪಂಚ ಲಕ್ಷ ಹೆಜ್ಜೆಯ ಪಾದಯಾತ್ರೆ ಅಖಂಡ ಸಮುದಾಯದ ಪಾದಯಾತ್ರೆ. ಸಮಾಜದ ಸರ್ವರೂ ಒಗ್ಗಟ್ಟಿನಿಂದ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಬೇಕು ಎಂದರು.

ಪಾದಯಾತ್ರೆ ಯಲಬುರ್ಗಾ, ಹರಿಹರ ಪೀಠ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಚಿವ ಸಿ.ಸಿ. ಪಾಟೀಲ, ಶಾಸಕ ಬಸನಗೌಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಇತರೆ ನಾಯಕರೊಂದಿಗೆ ಸಭೆ ನಡೆಸಲಾಗುವುದು ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ,‘ಅನೇಕ ವರ್ಷಗಳಿಂದ ಬಹುಸಂಖ್ಯಾತ ಸಮಾಜಕ್ಕೆ ಅದರ ಹಕ್ಕಿಗಾಗಿ ಹೋರಾಟ ಮಾಡುವ ಸಂದರ್ಭ ಬಂದಿರುವುದು ದುರದೃಷ್ಟಕರ ಸಂಗತಿ. ಭರವಸೆ ನಂಬಿದ್ದು, ಸಾಕು. ನಮ್ಮ ಹಕ್ಕು ಪಡೆಯಲು ಸಂಘಟಿತರಾಗಿ ಸರ್ಕಾರದ ಕಣ್ಣು ತೆರೆಸೋಣ. ಇದಕ್ಕಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಶತ ಸಿದ್ಧ. ಪಂಚಮಸಾಲಿ ಸಮಾಜದ ಎಲ್ಲ ಮುಖಂಡರು ತಮ್ಮ ವೈಯಕ್ತಿಕ ವರ್ಚಸ್ಸನ್ನು ಸಮಾಜಕ್ಕೆ ಧಾರೆ ಎರೆಯಲು ಮುಂದಾಗಬೇಕು ಎಂದರು.

ಮಾಜಿ ಸಂಸದ ಶಿವರಾಮಗೌಡ, ಸಮುದಾಯದ ಪದಾಧಿಕಾರಿಗಳಾದ ಸೋಮಶೇಖರ ಹಳಿಯಾಳ, ಶಿವಾನಂದ ಮೇಟಿ ಮಾತನಾಡಿದರು.

ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಕಳಕನಗೌಡ ಪಾಟೀಲ, ರಾಜ್ಯ ದಾಸೋಹ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಸುಂಕದ ಮುಖಂಡರಾದ ಬಸವಲಿಂಗಪ್ಪ ಭೂತೆ, ಬಿ.ಎಸ್.ಪಾಟೀಲ, ಎಲ್‌ವಿಟಿ ಕೆ.ನಾಗಪ್ಪ, ಕಿಶೋರಿ ಬೂದನೂರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.