ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಾಪುರ ಬೆಟ್ಟ: ನವಿಲುಗಳ ದಾಹ ನೀಗಿಸುವ ಗೆಳೆಯರು

ನೀರು, ಆಹಾರ ಅರಸಿ ಬರುವ ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳ
Last Updated 30 ಏಪ್ರಿಲ್ 2022, 11:33 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ವೆಂಕಟಾಪುರ ಬೆಟ್ಟದ ಸುತ್ತಮುತ್ತ ಇರುವ ನವಿಲುಗಳಿಗೆ ಠಾಕೂರ ಮಾನಪ್ಪ ನಾಯಕ್ ಹಾಗೂ ಕಿಶೋರ್ ಒಂದು ವರ್ಷದಿಂದ ನೀರು ಹಾಗೂ ಆಹಾರ ನೀಡುತ್ತಿದ್ದಾರೆ. ನೀರು ಅರಸಿ ಬರುವ ನವಿಲುಗಳ ಸಂಖ್ಯೆ ಹೆಚ್ಚಿದೆ.

ಹಿಂದಿನ ಬೇಸಿಗೆಯಲ್ಲಿ ದಾಹ ಹಿಂಗಿಸಿಕೊಳ್ಳಲು ಬಂದ ನವಿಲುಗಳು ಇಲ್ಲಿಯೇ ಠಿಕಾಣಿ ಹೂಡಿವೆ. ಹೊಸ ಅತಿಥಿಗಳಾಗಿ ಮತ್ತಷ್ಟು ನವಿಲುಗಳೂ ಇಲ್ಲಿಗೆ ಬರುತ್ತಿವೆ.

ಇವರು ಈ ಹಿಂದೆ ನವಿಲುಗಳಿಗೆ ಕುಡಿಯುವ ನೀರೊದಗಿಸಲು ತೊಟ್ಟಿಗಳನ್ನು ನಿರ್ಮಿಸಿದ್ದರು. ಈಗ ಆ ನೀರು ಸಾಲುತ್ತಿಲ್ಲ. ಹೀಗಾಗಿ ಈಗ ಸ್ವಂತ ಖರ್ಚಿನಲ್ಲಿ ಬೆಟ್ಟದ ಮೇಲೆ ಆರು ಅಡಿ ಎತ್ತರದ ಟ್ಯಾಂಕ್ ನಿರ್ಮಿಸಿದ್ದಾರೆ.

ಪೈಪ್‍ಗಳ ಮೂಲಕ ತೊಟ್ಟಿಗಳಿಗೆ ನೀರು ಹಾಯಿಸುತ್ತಿದ್ದಾರೆ.

‘ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಂಜೆ ಹಾಗೂ ಬೆಳಿಗ್ಗೆ ನವಿಲುಗಳು ನೀರು ಕುಡಿಯಲು ಇಲ್ಲಿಗೆ ಬರುತ್ತವೆ. ಬೆಟ್ಟದಲ್ಲಿ ನವಿಲಿನ ಜಾತ್ರೆ ನಡೆಯುವಂತೆ ಭಾಸವಾಗುತ್ತದೆ’ ಎಂದು ಠಾಕೂರ ಸಂತಸದಿಂದ ಹೇಳುತ್ತಾರೆ.

ಸುಮಾರು 16 ಕಿ.ಮೀ ಇರುವ ಈ ಬೆಟ್ಟ ವೆಂಕಟಾಪುರದಿಂದ ಬಾಗಲಕೋಟೆ ಜಿಲ್ಲೆಯ ಗುಡೂರವರೆಗೆ ಚಾಚಿಕೊಂಡಿದೆ. ಇದು ಸುಮಾರು 300 ಅಡಿ ಎತ್ತರವಿದೆ. ಬಂಡೆ ಗಲ್ಲುಗಳಿಂದ ತುಂಬಿಕೊಂಡಿದೆ.

‘ನವಿಲುಗಳಿಗೆ ಅಕ್ಕಿಗಿಂತ ಸಜ್ಜೆ ಹೆಚ್ಚು ಪ್ರಿಯ. ಒಂದು ವರ್ಷಕ್ಕೆ ಮೂರು ಕ್ವಿಂಟಲ್ ಸಜ್ಜೆ ಹಾಗೂ ಎರಡು ಕ್ವಿಂಟಲ್ ಅಕ್ಕಿ ಖರ್ಚಾಗುತ್ತದೆ. ನಮಗೆ ಕೇವಲ ಒಂದು ಎಕರೆ ಜಮೀನಿದೆ. ಪಕ್ಕದಲ್ಲಿನ ಎರಡು ಎಕರೆ ಜಮೀನು ಗುತ್ತಿಗೆ ಪಡೆದು ಅಲ್ಲಿ ನವಿಲಿಗಾಗಿಯೇ ಸಜ್ಜೆ ಬೆಳೆಯುತ್ತಿದ್ದೇವೆ’ ಎಂದು ಠಾಕೂರ ಅವರ ಪತ್ನಿ ಕಮಲಾಕ್ಷಿ ನಾಯಕ್ ಹೇಳುತ್ತಾರೆ.

ಈ ಮೊದಲು ನಾವು ಬೆಟ್ಟದ ಸಮೀಪ ಹೋದರೆ ನವಿಲುಗಳು ಭಯದಿಂದ ಹಾರಿ ಹೋಗುತ್ತಿದ್ದವು. ಆದರೆ ಈಗ ಅವುಗಳಿಗೆ ಕೊಂಚ ಭಯ ಕಡಿಮೆಯಾಗಿದೆ. ನಾವು ಹೋದರೂ ಅಲ್ಲಿಯೇ ಸುಳಿದಾಡುತ್ತಿರುತ್ತವೆ’ ಎನ್ನುತ್ತಾರೆ ಕಿಶೋರ್.

ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ನವಿಲುಗಳ ಸಂಖ್ಯೆ ಹೆಚ್ಚುತ್ತಿದ್ದು, ಸೂಕ್ತ ರಕ್ಷಣೆ ಇಲ್ಲದ ಕಾರಣ ನಾಯಿಗಳ ಪಾಲಾಗುತ್ತಿವೆ. ಸರ್ಕಾರ ಈ ಭಾಗದಲ್ಲಿ ನವಿಲು ಉದ್ಯಾನ ಮಾಡಿ ನವಿಲು ಸಂತತಿಯನ್ನು ಸಂರಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT