ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ದೈವಿ ಪುರುಷ, ಸ್ವಾಮಿ ವಿವೇಕಾನಂದರ ಪುನರ್ಜನ್ಮ: ಶಶಿಕಲಾ ಜೊಲ್ಲೆ

Last Updated 6 ಏಪ್ರಿಲ್ 2022, 7:49 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ದೈವಿ ಪುರುಷರಾಗಿದ್ದು, ಅವರು ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಏರ್ಪಡಿಸಿದ್ದ 42ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಹೆಸರು ನರೇಂದ್ರ ಎಂದಾಗಿತ್ತು. ಅವರನ್ನು ಚಿಕಾಗೋ ಸಮ್ಮೇಳನದಲ್ಲಿ ಕೊನೆಯಲ್ಲಿ ಕೂಡಿಸಿದ್ದರು. ಅವರ ಭಾಷಣದಿಂದ ಜಗತ್ತಿಗೆ ಭಾರತವನ್ನು ಪರಿಚಯಿಸಿದರು. ಅವರಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ಭಾರತ ಪರಿಚಯಿಸುವ ಮೂಲಕ ಗುರುವಾಗಿ ನಿಂತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ದಿನದ 24 ಗಂಟೆಯಲ್ಲಿ 18 ಗಂಟೆ ಕೆಲಸ ನಿರ್ವಹಿಸುತ್ತಿದ್ದಾರೆ. ದೇಶದ ಸುರಕ್ಷತೆಗಾಗಿ, ನಮಗಾಗಿ ಕೆಲಸ ಮಾಡುತ್ತಿದ್ದಾರೆ‌. ಕಾರ್ಯಕರ್ತರು ದೇಶಕ್ಕಾಗಿ ಅಳಿಲು ಸೇವೆ ಸಲ್ಲಿಸಬೇಕು. ಹಿರಿಯರ ಮಾರ್ಗದರ್ಶನದಿಂದ ಕೆಲಸ ನಿರ್ವಹಿಸಬೇಕು. ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಎಂದ ಪ್ರಧಾನಿಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷ ಸ್ಥಾಪನೆಗೆ ಹಲವರ ಬಲಿದಾನ ನಡೆದಿದೆ. ಸಂಘಟಕರು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಅವರ ಶ್ರಮ ಮತ್ತು ಸೇವಾ ಭಾವನೆಯಿಂದಾಗಿ ಇಂದು ದೇಶದ ಗದ್ದುಗೆ ಏರಲಾಗಿದೆ. ದೇಶವನ್ನು ಆಳುವ ಸ್ಥಿತಿಗೆ ಬಂದಿದ್ದೇವೆ. ಇಬ್ಬರು ಸಂಸದರಿಂದ ಪ್ರಾರಂಭವಾದ ಪಕ್ಷ ಇಂದು ಆಡಳಿತರೂಢ ಪಕ್ಷವಾಗಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ ಉಪಾಧ್ಯಾಯ ಸೇರಿ ಹಲವರ ಸಂಘಟನೆಯಿಂದ ಬಿಜೆಪಿ ಬೆಳೆದಿದೆ. ಇಂತಹ ತ್ಯಾಗಿಗಳನ್ನು ಸ್ಮರಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ‌ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕಾರ್ಯಕರ್ತರಿಂದ ಬೆಳೆದ ಪಕ್ಷ ಬಿಜೆಪಿಯಾಗಿದೆ. ಪಕ್ಷ ಸ್ಥಾಪಿಸುವ ವೇಳೆ ಬಹಳಷ್ಟು ಜನರು ಗೇಲಿ ಮಾಡಿದ್ದರು. ಆದರೆ, ಕಾರ್ಯಕರ್ತರು ಎದೆಗುಂದದೆ ಪಕ್ಷ ಸಂಘಟಿಸಿದ್ದಾರೆ. ಪ್ರಸ್ತುತ ದೇಶದಲ್ಲೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಕಾರ್ಯಕರ್ತರು ಸಮರ್ಥವಾಗಿ ನಿರ್ವಹಿಸಬೇಕು ಎಂದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ‌.ಚಂದ್ರಶೇಖರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಬಿಜೆಪಿ ಮುಖಂಡ ಡಾ. ಕುಲಕರ್ಣಿ, ನರೇಶ್, ನವೀನ್ ಗುಳಗಣ್ಣನವರ್, ದತ್ತುರಾವ್, ಪ್ರಭು ಕಪ್ಪಗಲ್ ಸೇರಿ ಮತ್ತಿತರರಿದ್ದರು.

ವೈಚಾರಿಕ ಹಿನ್ನೆಲೆ ಹೊಂದಿದ ಪಕ್ಷ ಬಿಜೆಪಿ: ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ ಮಾತನಾಡಿ, ಕಾಂಗ್ರೆಸ್ ಒಡೆದು ಹೋಗಿದೆ. ಬಿಜೆಪಿ 1980 ರಿಂದ ಈವರೆಗೆ ಅಲುಗಾಡಿಲ್ಲ. ಬಿಜೆಪಿಗೆ ವೈಚಾರಿಕ ಹಿನ್ನೆಲೆ ಇದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಪಕ್ಷದ ನಿಲುವಿದೆ. 42 ವರ್ಷದ ಪಕ್ಷಕ್ಕೆ ತನ್ನದೇ ಹಿನ್ನೆಲೆ ಇದೆ. ದಕ್ಷಿಣದ ಶ್ರೀಲಂಕಾ, ಉತ್ತರ ಪಾಕಿಸ್ತಾನದ ಸ್ಥಿತಿ ಏನಾಗಿದೆ? ಅಲ್ಲಿನ ಸ್ಥಿತಿಗೆ ಆ ದೇಶದ ರಾಜಕಾರಣವೇ ಕಾರಣವಾಗಿದೆ. ಅವರ ಸ್ಥಿತಿ ಕಂಡು ಕೃಷಿ, ಆರೋಗ್ಯ ಉಪಕರಣ, ಅವಶ್ಯಕ ವಸ್ತುಗಳನ್ನು ರಫ್ತು ಮಾಡಲಾಗಿದೆ. ಭಾರತದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT