ಶುಕ್ರವಾರ, ಫೆಬ್ರವರಿ 28, 2020
19 °C
ವಿಶೇಷ ಮೀಸಲು ಪೊಲೀಸ್ ಪೇದೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

'ಜೀವ ರಕ್ಷಿಸುವುದು ನಮ್ಮ ಜವಾಬ್ದಾರಿ' ಎಡಿಜಿಪಿ ಅಲೋಕ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ನೆರೆ ಹಾವಳಿ ಮತ್ತು ಪ್ರಕೃತಿ ವಿಕೋಪದಲ್ಲಿ ಜೀವ ರಕ್ಷಣೆಗೆ ಎನ್‌ಡಿಆರ್‌ಎಫ್‌ ತಂಡದೊಂದಿಗೆ ಕೈಜೋಡಿಸಿ ನೆರೆಯಿಂದ ತೊಂದರೆಗೆ ಒಳಗಾದ ಜನರ ಜೀವವನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕೆಎಸ್ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಹೇಳಿದರು‌.

ತಾಲ್ಲೂಕಿನ ಮುನಿರಾಬಾದ್ ವಿಶೇಷ ಮೀಸಲು ಪೋಲಿಸ್ ತರಬೇತಿ ಶಾಲೆಯಲ್ಲಿ ಶುಕ್ರವಾರ ನಡೆದ ವಿಶೇಷ ಮೀಸಲು ಪೊಲೀಸ್ ಪೇದೆ ಪ್ರಶಿಕ್ಷಣಾರ್ಥಿಗಳ 21ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪ್ರಶಿಕ್ಷಣಾರ್ಥಿಗಳಿಗೆ ಬದುಕಿನ ಮುಖ್ಯವಾದ ದಿನ. ಇದನ್ನು ಯಾವತ್ತೂ ಮರೆಯುವುದಿಲ್ಲ. ಏಕೆಂದರೆ ಇಂದಿನಿಂದ ವೃತ್ತಿ ಜೀವನಕ್ಕೆ ಕಾಲಿಡುತ್ತಾರೆ. ಇದರಲ್ಲಿ ಬೇರೆ ಬೇರೆ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. 21ಕ್ಕೆ ಏಕತಾ ದಿನದಂದು 49 ಪೊಲೀಸರು ಪ್ರಧಾನಿಗಳ ಸಮ್ಮುಖದಲ್ಲಿ ಕವಾಯತು ಪ್ರದರ್ಶನ ಮಾಡಲಿದ್ದಾರೆ. ಸಿವಿಲ್ ಪೊಲೀಸರು, ಸಾರ್ವಜನಿಕರು ಎಲ್ಲರಂತೆ ಕಾಣುವುದಿಲ್ಲ ಎನ್ನುವ ಅಸಮಾಧಾನ ನಿಮ್ಮಿಲ್ಲಿದೆ. ಇದನ್ನು ಬಿಡಬೇಕು. ಈಗ ನಿಮ್ಮ ಸಂಬಳವೂ ಆರಂಭದಲ್ಲಿಯೇ 34 ಸಾವಿರ ಇದೆ. ಹಾಗಾಗಿ ಯಾರಿಗಿಂತಲೂ ನೀವು ಕಡಿಮೆ ಇಲ್ಲ ಎಂದು ಅರ್ಥಮಾಡಿಕೊಳ್ಳಬೇಕು ಎಂದರು.

ಧೈರ್ಯದಿಂದ ವಿಶೇಷವಾದ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಪ್ರಾಣ ಪಣಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಒಳ್ಳೆ ಕೆಲಸ ಮಾಡುವ ಮೂಲಕ ನಿಮ್ಮ ಸ್ನೇಹಿತರು, ತಂದೆ-ತಾಯಿಗಳಿಗೆ ಕೀರ್ತಿ ತರಬೇಕು. ನಿಮ್ಮಲ್ಲಿ ಬಹುತೇಕರು ಶ್ರೀಮಂತರಲ್ಲ. ಹಾಗಾಗಿ ಪಾಲಕರು ಬಡತನದಲ್ಲಿ ನಿಮಗೆ ಶಿಕ್ಷಣ ಕಲಿಸಿದ್ದಾರೆ. ಹಾಗಾಗಿ ಅವರನ್ನು ಮರೆಯಬಾರದು. ಅದೇ ರೀತಿಯಾಗಿ ಅನ್ನ ನೀಡುವ ಸಾರ್ವಜನಿಕರು ಮತ್ತು ಇಲಾಖೆಗೆ ಸೇವೆ ಸಲ್ಲಿಸಬೇಕು‌. ಬೇರೆ ಕಡೆ ವರ್ಗ ಮಾಡುತ್ತಿಲ್ಲ ಎಂದು ಬೇಸರದಿಂದ ವೃತ್ತಿ ಜೀವನಕ್ಕೆ ಕಾಲಿಡಬೇಡಿ. ಉತ್ಸಾಹದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಅಧಿಕಾರ, ಹುದ್ದೆ ಯಾರಿಗೂ ಶಾಶ್ವತ ಅಲ್ಲ‌. ಆ ಹುದ್ದೆಯಲ್ಲಿ ಎಷ್ಟು ದಿನ ಇರುತ್ತೇವೆಯೋ ಅಷ್ಟು ದಿನ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ನಿಮಗಿರುವ ಕರ್ತವ್ಯವನ್ನು ನಿರ್ವಹಿಸಿ, ಉನ್ನತ ಹುದ್ದೆಗೆ ಪ್ರಯತ್ನ ಮಾಡಿದರೆ ತಪ್ಪಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು. ಈ ಮೂಲಕ ತರಬೇತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಸ್ವಾಗತಿಸಿದರು. ಎಸಿಬಿಯ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ ನಿರೂಪಿಸಿದರು. ಪರೇಡ್ ಕಮಾಂಡರ್ ವಿಶ್ವನಾಥ ರೆಡ್ಡಿ ನೇತೃತ್ವದಲ್ಲಿ ನಿರ್ಗಮನ ಪಥಸಂಚಲನ ನೆರವೇರಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಬೆಳಗಾವಿ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಪ್ರಾಚಾರ್ಯ ರಮೇಶ ಬೋರ್ಗಾವಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)