ಗಂಗಾವತಿ: ‘ನಾವು ಬೇರೆಯವರಿಗೆ ಪೂಜೆ ಮಾಡಬೇಡಿ ಎಂದು ಹೇಳಿಲ್ಲ. ಆದರೆ, ಅವರು ಇಲ್ಲಿ ಪೂಜೆ ಮಾಡಬೇಡಿ ಎಂದು ನಮಗೆ ಹೇಳುತ್ತಿದ್ದಾರೆ. ಇದು ಅಸಂವಿಧಾನಿಕ’ ಎಂದು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಉತ್ತರಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ಶ್ರೀಮಠದಿಂದ ಜಯತೀರ್ಥರ ಆರಾಧನೆ ಮಾಡುತ್ತ ಬರುತ್ತಿದ್ದು, ಕಳೆದ ವರ್ಷ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಕಾರಣ ಆರಾಧನೆ ನಡೆಸಲು ಆಗಲಿಲ್ಲ. ಆದರೆ, ಆನೆಗೊಂದಿ ಗ್ರಾಮದ ಶಾಖಾ ಮಠದಲ್ಲಿ ಆರಾಧನೆ ನಡೆಸಲಾಯಿತು. ಬೇರೆ ಮಠದವರು ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಿ ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದರು ಎಂದರು.
ಈ ವರ್ಷ ಜಯತೀರ್ಥರ ಆರಾಧನೆ ನಡೆಸಲು ನಿರ್ಧರಿಸುತ್ತಿದಂತೆ ಬೇರೆ ಮಠದವರು ಇಲ್ಲಸಲ್ಲದ ಉತ್ಸವಗಳನ್ನು ಹಮ್ಮಿಕೊಂಡು ನಮ್ಮ ಆರಾಧನೆಗೆ ಅಡ್ಡಿಪಡಿಸಲು ನ್ಯಾಯಾಲಯದ ಮೊರೆ ಹೋದರು. ನಾವು ಸಹ ನ್ಯಾಯಾಲಯ ಮೊರೆ ಹೋಗಿದ್ದೇವೆ. ಏಕ ಸದಸ್ಯ ಪೀಠ ಎರಡು ದಿನ ವಿಚಾರಣೆ ನಡೆಸಿ 3ನೇ ದಿನ ಆರಾಧನೆಗೆ ಅವಕಾಶ ನೀಡಿ ಆದೇಶ ಹೊರಡಿಸಿತು ಎಂದು ಹೇಳಿದರು.
‘ಈ ಆದೇಶದಿಂದ ಅಸಂತೃಪ್ತಿಗೊಂಡ ಬೇರೆ ಮಠದವರು ಪ್ರತಿಭಟನೆ ನಡೆಸಿ ನ್ಯಾಯಾಂಗ ನಿಂದನೆ ಮಾಡಿದರು. ಮೇಲ್ಮನವಿ ಸಲ್ಲಿಸಿದರು. ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿ ಜುಲೈ 8, 9 ಹಾಗೂ 10ರಂದು ಜಯತೀರ್ಥರ ಆರಾಧನೆ ನಡೆಸಲು ಅವಕಾಶ ನೀಡಿತು. ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ’ ಎಂದು ತಿಳಿಸಿದರು.
ನವ ವೃಂದಾವನ ನಡುಗಡ್ಡೆಯಲ್ಲಿ ಯಾವತ್ತೂ ಶಾಂತಿಭಂಗ ಉಂಟಾಗುವ ಸನ್ನಿವೇಶಗಳು ನಡೆದಿಲ್ಲ. ಇನ್ನೊಬ್ಬರ ಆಚರಣೆಗೆ ತೊಂದರೆ ಮಾಡುವುದಿಲ್ಲ ಎಂದರು.
ರಾಯರಮಠ ಶಾಂತಿ–ಸೌಹಾರ್ದಕ್ಕೆ ತೆರದ ಬಾಗಿಲು ಇದ್ದಂತೆ. ಇಲ್ಲಿನ ವಿವಾದಗಳು ಬಗೆಹರಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿದ್ದು, ಇನ್ನೊಂದು ಮಠದವರು ಆ ನಿಟ್ಟಿನಲ್ಲಿ ಚಿಂತಿಸಿದಾಗ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.