ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಸಾಧಕರ ಸ್ವತ್ತು, ಸೋಮಾರಿಗಳದ್ದಲ್ಲ

ಪ್ರೌಢಶಾಲೆಗಳ ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಸಕ ಹಿಟ್ನಾಳ ಅಭಿಮತ
Last Updated 6 ಡಿಸೆಂಬರ್ 2019, 15:13 IST
ಅಕ್ಷರ ಗಾತ್ರ

ಕೊಪ್ಪಳ: ಪ್ರತಿಭೆ ಎನ್ನುವುದು ಸಾಧಕರ ಸ್ವತ್ತು ಹೊರತು ಸೋಮಾರಿಗಳ ಸ್ವತ್ತಲ್ಲ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅವರಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ಕೆ ಪ್ರತಿಭಾ ಕಾರಂಜಿ ಸಹಾಯಕವಾಗಿದೆ. ಪ್ರತಿಭೆಯು ಸಾಧನೆ ಮಾಡಬೇಕು ಎಂಬ ಹಂಬಲ ಇರುವವರ ಸ್ವತ್ತು ಹೊರತು ಸೋಮಾರಿಗಳ ಸ್ವತ್ತಲ್ಲ. ಪ್ರಾಥಮಿಕ ಹಂತದಲ್ಲಿ ನೀಡುವ ಶಿಕ್ಷಣ ಬಹಳ ಮಹತ್ವವನ್ನು ಪಡೆದಿದೆ. ಗುಣಾತ್ಮಕ ಶಿಕ್ಷಣವನ್ನು ನೀಡಲು ಪ್ರತಿಯೊಬ್ಬ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ನಮ್ಮ ಭಾಗವು ಹಿಂದುಳಿದ ಭಾಗವಾಗಿದೆ ಎಂಬ ಉದ್ದೇಶದಿಂದ 371(ಜೆ) ಕಲಂ ಜಾರಿಗೆ ತರಲಾಗಿದೆ. ಮೀಸಲಾತಿಯಲ್ಲಿ ನಿಗದಿಪಡಿಸಿದ ಹುದ್ದೆಗಳನ್ನ ಪಡೆಯಲು ಶಿಕ್ಷಣ ಬಹಳ ಮುಖ್ಯವಾಗಿದೆ. 10ನೇ ತರಗತಿಯ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕ್ಷೇತ್ರದ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ತರಗತಿ ಪ್ರಾರಂಭ ಮಾಡಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಜಾರಿಗೆ ತಂದಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಾದರಿಯ ಕಾರ್ಯಕ್ರಮವಾಗಿದೆ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ,ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ, ಮಕ್ಕಳಲ್ಲಿನ ಅನೇಕ ವಿಶೇಷತೆಗಳನ್ನು ಗುರುತಿಸುವ ನಿಟ್ಟಿನಲ್ಲಿ 2002ರಿಂದ ಇಂತಹ ವಿನೂತ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಗಿದೆ. ನಿರ್ಣಾಯಕರು ಮಕ್ಕಳಲ್ಲಿ ತಾರತಮ್ಯವನ್ನು ಮಾಡದೇ ಸೂಕ್ತವಾದ ಪ್ರತಿಭೆ ಗುರುತಿಸಿ ಆಯ್ಕೆ ಮಾಡಬೇಕು ಎಂದರು.

ಬಾಲಕರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಪ್ರಾಣೇಶ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯಗೂಳಪ್ಪ ಹಲಗೇರಿ,ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಶಂಕರಗೌಡ ಮಾಲಿಪಾಟೀಲ, ಎಸ್.ಬಿ.ಕುರಿ, ಮಾರ್ಥಂಡರಾವ ದೇಸಾಯಿ, ನೋಡಲ್ ಅರವಿಂದ, ಶಿಕ್ಷಣ ಸಂಯೋಜಕ ಚಂದ್ರಶೇಖರ ಹತ್ತಿಕಟಗಿ, ಶಂಕ್ರಪ್ಪ, ಕೃಷ್ಣಮೂರ್ತಿ, ಸುಮತಿ.ಸಿ., ಸಾವಿತ್ರಿ ಮುಂತಾದವರು ಹಾಜರಿದ್ದರು.

ಕಾರ್ಯಕ್ರಮವನ್ನು ಸಿ.ಆರ್.ಪಿ.ಹುಲುಗಪ್ಪ ಕಟ್ಟಿಮನಿ ನಿರೂಪಿಸಿದರು. ಸಿ.ಆರ್.ಪಿ.ಹನುಮಂತಪ್ಪ ಕುರಿ ಸ್ವಾಗತಿಸಿದರು. ಬಿ.ಆರ್.ಪಿ.ಚಂದ್ರುಹೆಳವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT