ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಪೂರ್ವ ಶಿಕ್ಷಣವೇ ಬುನಾದಿ: ಜಿಲ್ಲಾಧಿಕಾರಿ

ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಮೇಘಾಲಯ ತಂಡ ಭೇಟಿ; ಸಮಾಲೋಚನೆ
Published 5 ಡಿಸೆಂಬರ್ 2023, 7:04 IST
Last Updated 5 ಡಿಸೆಂಬರ್ 2023, 7:04 IST
ಅಕ್ಷರ ಗಾತ್ರ

ಕೊಪ್ಪಳ: ‘ಶಾಲಾಪೂರ್ವ ಶಿಕ್ಷಣ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ಈ ವ್ಯವಸ್ಥೆಯಲ್ಲಿ ಔಪಚಾರಿಕ ಶಿಕ್ಷಣಕ್ಕೆ ಒಳಪಡುವ ಮುನ್ನವೇ ಮಗುವನ್ನು ಶಾಲೆಗೆ ತೆರಳಲು ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ಧಗೊಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಮೇಘಾಲಯ ರಾಜ್ಯದ ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡವು ಜಿಲ್ಲೆಯಲ್ಲಿನ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ, ಕಲಿಕೆ, ನಲಿಕಲಿ ಕಾರ್ಯಕ್ರಮಗಳ ಕುರಿತು ವೀಕ್ಷಣೆಗಾಗಿ ಬಂದಿದ್ದ ತಂಡದ ಜೊತೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.

‘ನಮ್ಮಲ್ಲಿ ಬಹುತೇಕರು ಅಂಗನವಾಡಿಗಳಿಂದಲೇ ಕಲಿಕೆ ಆರಂಭಿಸಿದ್ದೇವೆ. ಶಾಲಾ ಶಿಕ್ಷಣದ ಪೂರ್ವದಲ್ಲಿ ಕಲಿಕೆಯೆಡೆಗೆ ಮಗುವಿನ ಆಸಕ್ತಿ ಹೆಚ್ಚಿಸುವುದು, ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಮಗುವಿಗೆ ಅಗತ್ಯ ಜ್ಞಾನ ನೀಡುವುದು, ಸಾಮಾಜಿಕವಾಗಿ ಬೆರೆಯುವಿಕೆ, ಔಪಚಾರಿಕ ಶಿಕ್ಷಣಕ್ಕೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಮಗುವನ್ನು ಸಿದ್ಧಗೊಳಿಸುವಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದರು.

‘ಇದಕ್ಕೆ ಪೂರಕವಾಗಿ ಅಂಗನವಾಡಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳಿಗೆ ಬಣ್ಣಗಳು, ಪ್ರಾಣಿಗಳು, ಆಕಾರಗಳ ಗುರುತಿಸುವಿಕೆ, ಗಣಿತದ ಆಕಾರಗಳ ಗ್ರಹಿಸುವಿಕೆ ಮುಂತಾದವುಗಳನ್ನು ತಿಳಿಸಿಕೊಡಲಾಗುತ್ತದೆ’ ಎಂದು ತಂಡದ ಸದಸ್ಯರಿಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಡಿಡಿಪಿಐ ಶ್ರೀಶೈಲ ಬಿರಾದಾರ, ಟಾಟಾ ಕಲಿಕಾ ಟ್ರಸ್ಟ್‌ ಯೋಜನೆಯ ಮುಖ್ಯಸ್ಥೆ ಚಿತ್ಕಲಾ, ಪಿಒ ವೀಣಾ ಎಸ್‌.ಎಸ್, ಶಿವಕುಮಾರ, ಕೊಟ್ರೇಶ, ಗಿರೀಶ್, ಬಳ್ಳಾರಿಯ ವ್ಯವಸ್ಥಾಪಕರಾದ ಜಗನ್ನಾಥ, ಮೇಘಾಲಯದ ಡಯಟ್‌ನ ಸಹಾಯಕ ಪ್ರಾಧ್ಯಾಪಕ ಆರ್.ಎಂ.ಲಾಲೋಬ್, ಸಂಯೋಜಕರಾದ ಎಸ್.ಮೇರಕ್ ಪಾಲ್ಗೊಂಡಿದ್ದರು.

Highlights - ನಲಿಕಲಿ ಯೋಜನೆ ಬಗ್ಗೆ ಮಾಹಿತಿ ಸಂಗ್ರಹ ಮಕ್ಕಳ ಕಲಿಕಾ ವಿಧಾನ ಬಗ್ಗೆ ಮೆಚ್ಚುಗೆ ಜಿಲ್ಲೆಯ ವಿವಿಧ ಅಂಗವಾಡಿ ಕೇಂದ್ರಗಳಿಗೆ ತಂಡ ಭೇಟಿ

Cut-off box - ಮೇಘಾಲಯ ತಂಡದ ಮೆಚ್ಚುಗೆ ಮೇಘಾಲಯದಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಎರಡು ದಿನ ತಳಕಲ್ ಮಂಡಲಗಿರಿ ಹೇರೂರ ಹಿರೇಮನ್ನಾಪೂರ ಗುಮಗೇರಿ ಕೇಂದ್ರಗಳಿಗೆ ಭೇಟಿ ನೀಡಿದ್ದ ವೇಳೆ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳ ವೀಕ್ಷಣೆ ಕಲಿಕಾ ಸಾಮಗ್ರಿಗಳ ವೀಕ್ಷಣೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜೊತೆ ತಂಡದ ಸದಸ್ಯರು ಮಾಹಿತಿ ಪಡೆದುಕೊಂಡರು. ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತಂಡದ ಸದಸ್ಯೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT