ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿದ್ಧತೆ ಪೂರ್ಣ

ಕೊಠಡಿಗಳಿಗೆ ಸ್ಯಾನಿಟೈಸರ್‌ ಸಿಂಪಡಣೆ: ನಿಯುಕ್ತಿಗೊಂಡ ಸಿಬ್ಬಂದಿಗೆ ಕೋವಿಡ್ ಲಸಿಕೆ
Last Updated 19 ಜುಲೈ 2021, 4:21 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಯಲಬುರ್ಗಾ: ಇಂದು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಶಾಲೆ ಹಾಗೂ ಪರೀಕ್ಷಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪರೀಕ್ಷೆ ನಡೆಸಬೇಕೋ ಅಥವಾ ಬೇಡವೋ ಎಂಬ ಗೊಂದಲದ ನಡುವೆ ಕೊನೆಗೆ ಪರೀಕ್ಷೆ ನಡೆಸುವ ತೀರ್ಮಾನದ ಕಾರಣ ಶಿಕ್ಷಣ ಇಲಾಖೆ ಮಕ್ಕಳು ಹಾಗೂ ಪೋಷಕರಲ್ಲಿದ್ದ ಆತಂಕ ದೂರ ಮಾಡಿ ಪರೀಕ್ಷಾ ಪ್ರಕ್ರಿಯೆಯು ಹಬ್ಬದ ವಾತಾವರಣದಲ್ಲಿ ನಡೆಯುವಂತೆ ಮಾಡಿದೆ.

ಜು.19 ಮತ್ತು 22ರಂದು ನಡೆಯಲಿರುವ ಈ ಪರೀಕ್ಷೆಗೆ ಸಂಬಂಧಿಸಿದಂತೆ ಸ್ಥಳೀಯ ಮುಧೋಳ ರಸ್ತೆಗೆ ಹೊಂದಿಕೊಂಡಿರುವ ಬಾಲಕಿಯರ ಸರಕಾರಿ ಪ್ರೌಢ ಶಾಲೆಯನ್ನು ಅಲಂಕರಿಸಿದ್ದು ಕಂಡುಬಂತು.

ಪರೀಕ್ಷಾ ಮುಖ್ಯ ಅಧಿಕ್ಷಕ ವಿ.ಎಸ್. ಬೆಣಕಲ್ಲ ಈ ಕುರಿತು ಮಾತನಾಡಿ,‘ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಸಂಭ್ರಮದಿಂದ ಕೇಂದ್ರಕ್ಕೆ ಬಂದು ಖುಷಿಯಾಗಿಯೇ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವ್ಹಿ.ಧರಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದೈಹಿಕ ಪರಿವೀಕ್ಷಕ ಬಸವರಾಜ ಅಡಿವೆಪ್ಪನವರ್, ಶರಣಯ್ಯ ಸರಗಣಾಚಾರ, ಹನಮಂತಪ್ಪ ವಗ್ಯಾನವರ್, ನಿಂಗಪ್ಪ ನಡುಲಮನಿ,ನಿಂಗಪ್ಪ ಯರಾಶಿ, ಗುರುಪಾದಗೌಡ, ಎಸ್.ಡಿ.ಅಪ್ಪಾಜಿ, ಎಸ್.ಎಂ.ಕುಲಕರ್ಣಿ ಹಾಗೂ ಬಸವರಾಜ ಇದ್ದರು.

ಕೊಠಡಿಗಳಿಗೆ ಸ್ಯಾನಿಟೈಸರ್: ಪರೀಕ್ಷೆ ಬರೆಯಲು ಮಕ್ಕಳು ಬರುವ ಕಾರಣ ಭಾನುವಾರ ಪರೀಕ್ಷಾ ಕೇಂದ್ರದ ವಿವಿಧ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು.

ಮಕ್ಕಳ ಆರೋಗ್ಯ ದೃಷ್ಟಿಯಿಂದ ವಿಶೇಷ ಕಾಳಜಿ ತೋರಿ ಪ್ರತಿಯೊಂದು ಆಸನ ಹಾಗೂ ಕೊಠಡಿಯ ಒಳ–ಹೊರಗೆ ಸಿಂಪಡಿಸಿ ಕೋವಿಡ್‌ ನಿಯಮಗಳ ಅಚ್ಚುಕಟ್ಟು ಪಾಲನೆಗೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಪರೀಕ್ಷಾ ಕೇಂದ್ರದ ಅಧಿಕ್ಷಕ ಸಿದ್ದಲಿಂಗಪ್ಪ ತಳವಾರ, ಬಸವರಾಜ ಮೇಟಿ ಮಾತನಾಡಿ,‘ಮಕ್ಕಳ ಸುರಕ್ಷತೆ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಕ್ರಮಕೈಗೊಳ್ಳಲಾಗಿದೆ’ ಎಂದರು.

ಸುರೇಶಪ್ಪ ಹೊಸಮನಿ, ಪ್ರವೀಣ ವಸ್ತ್ರದ ಹಾಗೂ ಹನಮಂತಪ್ಪ ಇದ್ದರು.

‘ಮಾರ್ಗಸೂಚಿ ಪಾಲನೆಗೆ ಒತ್ತು’

ಕುಷ್ಟಗಿ: ತಾಲ್ಲೂಕಿನ 28 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಗೊಂದಲಕ್ಕೆ ಅವಕಾಶವಿಲ್ಲದೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಕೋವಿಡ್‌ ಮುಂಜಾಗ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚೆನ್ನಬಸಪ್ಪ,‘ಸುರಕ್ಷತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಇಲಾಖೆ ಮತ್ತು ಮಕ್ಕಳಲ್ಲಿ ಗೊಂದಲವಿಲ್ಲ. ಪರೀಕ್ಷಾ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಮೂಲಕ ಯಶಸ್ವಿಗೊಳಿಸಲು ಇಲಾಖೆ ಬದ್ಧವಾಗಿದೆ’ಎಂದು ಹೇಳಿದರು.

ಸರ್ಕಾರದ ಮಾರ್ಗದರ್ಶನದಂತೆ ಪರೀಕ್ಷೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಣ, ಆರೋಗ್ಯ ಇತರೆ ಇಲಾಖೆಗಳಿಗೆ ಸೇರಿದ ಅಧಿಕಾರಿಗಳಿಂದ ಡಿ ದರ್ಜೆ ನೌಕರರೆಲ್ಲ ಕೋವಿಡ್‌ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರು.

ಬೆಳಿಗ್ಗೆ 10.30 ಕ್ಕೆ ಪರೀಕ್ಷೆ ಆರಂಭಗೊಳ್ಳಲಿದ್ದು, ಇಲ್ಲಿಯ ಉಪ ಖಜಾನೆಯಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ಹತ್ತು ಮಾರ್ಗಗಳ ಮೂಲಕ ಎಲ್ಲ ಕೇಂದ್ರಗಳಿಗೆ ಒಂದು ತಾಸು ಮೊದಲೇ ತಲುಪಿಸಲಾಗುತ್ತದೆ. ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ ಎಲ್ಲ ಮಕ್ಕಳೂ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳ
ಲಾಗುತ್ತಿದ್ದು ಹಾಜರಾದವರೆಲ್ಲ ತೇರ್ಗಡೆಹೊಂದಲಿದ್ದಾರೆ ಎಂದರು.

ಅದೇ ರೀತಿ ಶುಲ್ಕ ನೀಡದಿರುವ ಕಾರಣಕ್ಕೆ ಪ್ರವೇಶಪತ್ರ ನಿರಾಕರಿಸಿರುವ ಕುರಿತು ತಾಲ್ಲೂಕಿನಲ್ಲಿ ಯಾವುದೇ ದೂರು ಬಂದಿಲ್ಲ ಎಂದು ಅವರು ಹೇಳಿದರು.

ಒಂದು ವೇಳೆ ಅಂಥ ಮಾಹಿತಿ ಬಂದರೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಮುಲಾಜಿಲ್ಲದೇ ಕ್ರಮಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಚೆನ್ನಬಸಪ್ಪ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT