ಕೊಪ್ಪಳ: ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಲೇಬರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆದ ಬಳಿಕ ಸಂಘಟನೆಯ ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮಾತನಾಡಿ ‘ನ್ಯಾಯಯುತ ಹಕ್ಕುಗಳನ್ನು ಪಡೆಯಲು ಕಟ್ಟಡ ಕಾರ್ಮಿಕರ ಸಂಘಟಿತ ಹೋರಾಟದ ಒತ್ತಡದಿಂದ ಕಾರ್ಮಿಕರ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದ್ದ ಮಂಡಳಿ ನಿಷ್ಕ್ರೀಯವಾಗಿದೆ’ ಎಂದರು.
‘ನೋಂದಾಯಿತ ಕಾರ್ಮಿಕನ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಅರ್ಜಿಗಳನ್ನು ವಿಲೇವಾರಿ ಮಾಡಿ ಹಣ ಬಿಡುಗಡೆ ಮಾಡಬೇಕು. ವಯಸ್ಸಾದ ಮೇಲೆ ಆರು ತಿಂಗಳ ಒಳಗೆ ಪಿಂಚಣಿ ಪಡೆಯಲು ಹರಸಹಾಸ ಪಡಬೇಕಾಗಿದೆ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇಂದಿಗೂ ಬಹುತೇಕ ನೈಜ ಕಟ್ಟಡ ಕಾರ್ಮಿಕರು ನೋಂದಣಿಯಾಗದೆ ಇರುವುದು ಒಂದೆಡೆಯಾದರೆ ಮತ್ತೊಂದೆಡೆ ಕಟ್ಟಡ ಕಾರ್ಮಿಕರಲ್ಲದವರ ನೋಂದಣಿ ಅವ್ಯಾಹತವಾಗಿ ಸಾಗಿದೆ’ ಎಂದು ಆರೋಪಿಸಿದರು.
ಗ್ರಾಮ ಘಟಕದ ಮುಖಂಡರಾದ ಕುಮಾರ್ ಹುಲಗಿ, ನಾಗರಾಜ್ ಹುಲಗಿ, ರಾಮಲಿಂಗಶಾಸ್ತ್ರಿ, ನಾಗರಾಜ್ ಬಿಸರಳ್ಳಿ, ಇಮಾಮ್ ಸಾಬ್ ಲಿಂಗದಹಳ್ಳಿ, ಯಂಕನಗೌಡ ಲಿಂಗದಹಳ್ಳಿ, ಶಬ್ಬೀರ್, ಚಂದ್ರಶೇಖರ್, ಮಹಾಂತೇಶ್, ರಂಜಾನ್ ಬಿ, ಹುಲಿಗೆಮ್ಮ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.