ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PU Results | ಕೊಪ್ಪಳ: ಮೂರೂ ವಿಭಾಗದಲ್ಲಿ ಬಾಲಕಿಯರೇ ಸೂಪರ್‌

ಕಳೆದ ವರ್ಷಕ್ಕಿಂತಲೂ ಶೇ. 6.75ರಷ್ಟು ಉತ್ತಮ ಸಾಧನೆ
Published 10 ಏಪ್ರಿಲ್ 2024, 16:22 IST
Last Updated 10 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಕೊಪ್ಪಳ: ದ್ವಿತೀಯ ಪಿಯುಸಿ ವರ್ಷದ ಪರೀಕ್ಷೆ 1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಕೊಪ್ಪಳ ಜಿಲ್ಲೆ ಕಳೆದ ವರ್ಷಕ್ಕಿಂತಲೂ ಶೇ. 6.75ರಷ್ಟು ಹೆಚ್ಚಿನ ಸಾಧನೆ ಮಾಡಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಎರಡನೇ ಸ್ಥಾನ ಸಂಪಾದಿಸಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬಾಲಕಿಯರೇ ಅಗ್ರಸ್ಥಾನ ಸಂಪಾದಿಸಿಕೊಂಡಿದ್ದು ಈ ಮೂರೂ ವಿಭಾಗದಲ್ಲಿ ಮೊದಲ ಐದು ಸ್ಥಾನ ಪಡೆದವರಲ್ಲಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಅದರಲ್ಲಿಯೂ ಶ್ರೀರಾಮನಗರದ ವಿದ್ಯಾನಿಕೇತನ ಕಾಲೇಜು ವಿಜ್ಞಾನ ವಿಭಾಗದಲ್ಲಿ ಎಲ್ಲ ಮೊದಲ ಐದು ಸ್ಥಾನಗಳನ್ನು ಬಾಚಿಕೊಂಡಿದೆ.

22ನೇ ಸ್ಥಾನ: ರಾಜ್ಯಮಟ್ಟದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜಿಲ್ಲೆ ಕಳೆದ ವರ್ಷದಂತೆ ಈ ವರ್ಷವೂ 22ನೇ ಸ್ಥಾನದಲ್ಲಿ ಮುಂದುವರಿದಿದೆ. 2023ರಲ್ಲಿ ಜಿಲ್ಲೆಗೆ ಶೇ. 74.8ರಷ್ಟು ಒಟ್ಟು ಫಲಿತಾಂಶ ಲಭಿಸಿದ್ದರೆ, ಈ ಬಾರಿ ಶೇ. 80.83ರಷ್ಟು ಪಡೆದುಕೊಂಡಿದೆ. ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳಿಕೆಯೂ ಹೆಚ್ಚಾಗಿರುವುದು ವಿಶೇಷ.

ಬೀದರ್‌ ರಾಜ್ಯಮಟ್ಟದಲ್ಲಿ 19ನೇ ರ‍್ಯಾಂಕ್‌ನೊಂದಿಗೆ ಕ.ಕ. ಭಾಗದ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಕೊಪ್ಪಳ ಎರಡನೇ ಸ್ಥಾನದಲ್ಲಿದೆ. ಉಳಿದ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ರಾಯಚೂರು ನಂತರದ ಸ್ಥಾನಗಳನ್ನು ಹೊಂದಿವೆ.

ಜಿಲ್ಲೆಯ ಫಲಿತಾಂಶ ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಉತ್ತಮವಾಗಿದೆ. ಸಾಮೂಹಿಕ ಪ್ರಯತ್ನಕ್ಕೆ ಸಂದ ಗೌರವ ಇದು. ನಮ್ಮ ಜಿಲ್ಲೆ ರಾಜ್ಯಮಟ್ಟದಲ್ಲಿ 20ರ ಒಳಗೆ ಸ್ಥಾನ ಪಡೆಯಬೇಕು ಎನ್ನುವ ಆಸೆಯಿತ್ತು.
ಜಗದೀಶ್‌ ಎಚ್‌.ಎಸ್‌., ಡಿಡಿಪಿಯು

ಜಿಲ್ಲೆಯಿಂದ ಪರೀಕ್ಷೆಗೆ ಒಟ್ಟು 13,435 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 10,859 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ 6,017 ವಿದ್ಯಾರ್ಥಿಗಳಲ್ಲಿ 4,275 ಜನ ಉತ್ತೀರ್ಣರಾಗಿದ್ದು ಈ ವಿಭಾಗದಲ್ಲಿ ಜಿಲ್ಲೆ ಶೇ 71.05ರಷ್ಟು ಸಾಧನೆ ಮಾಡಿದೆ.

ವಾಣಿಜ್ಯ ವಿಭಾಗದಲ್ಲಿ 2,269 ವಿದ್ಯಾರ್ಥಿಗಳ ಪೈಕಿ 1,893 ಜನ ಪಾಸ್‌ ಆಗಿದ್ದು ಈ ವಿಭಾಗದಲ್ಲಿ ಶೇ.83.43 ರಷ್ಟು ಫಲಿತಾಂಶವಾಗಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 5,149ರಲ್ಲಿ 4,691 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಮೂಲಕ ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ. 91.11ರಷ್ಟಾಗಿದೆ.

ವಿಜ್ಞಾನದಲ್ಲಿ ವಿದ್ಯಾನಿಕೇತನ ‘ಕ್ಲೀನ್‌ ಸ್ವೀಪ್‌’

ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿರುವ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ. ಮೊದಲ ಎಲ್ಲ ಐದು ಸ್ಥಾನಗಳನ್ನು ಇದೇ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದು ವಿಶೇಷ. ಕಾವ್ಯಾ (ಶೇ. 98.83) ಸಂಗೀತಾ (ಶೇ. 98.66) ಅಶ್ವಿನಿ (ಶೇ. 98.50) ಅಕ್ಷತಾ ಬಿ. ಅರ್ಚಿ ಆರ್‌. ಕಠಾರಿ ಗಂಗಾಧರ ಸಾಲಿಮಠ ಪೂಜಾ (ಎಲ್ಲರೂ ಶೇ .98.33) ಅಂಜಲಿ ಅನುಪಮಾ ಅರಳಿಗೌಡರ್ ಧನುಷ್‌ ದಿವಾಕರ ಗೌಡ ಜಿ. ಗಿರೀಶ್ ಪಾಟೀಲ ಪ್ರಗ್ನ್ಯಾ ಜಿ.ಎಂ. ಪ್ರಲ್ಹಾದ ಗಂಭೀರ್‌ ಹಾಗೂ ಶ್ರೀಜಾ ಡಿ. (ಶೇ. 98.16) ಫಲಿತಾಂಶ ಪಡೆದಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ. ನಗರ ಪ್ರದೇಶದಲ್ಲಿ ಒಟ್ಟು 9331 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 7530 ಮಕ್ಕಳು ತೇರ್ಗಡೆಯಾಗಿದ್ದು ಈ ವಿಭಾಗದ ಫಲಿತಾಂಶ ಶೇ. 80.07ರಷ್ಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಬರೆದ 4104 ಮಕ್ಕಳಲ್ಲಿ 3329 ವಿದ್ಯಾರ್ಥಿಗಳು ಪಾಸ್‌ ಆಗಿದ್ದು ಫಲಿತಾಂಶ ಶೇ. 81.12ರಷ್ಟಾಗಿದೆ.

ಅಹಿಶ್ರೀ ದೇಸಾಯಿ
ಅಹಿಶ್ರೀ ದೇಸಾಯಿ
ಕಾವ್ಯಾ
ಕಾವ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT