ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆ ತಡೆಗೆ ಕ್ರಮ

ಮರಳು ಗಣಿಗಾರಿಕೆ; ಸಾರ್ವಜನಿಕ ಆಲಿಕೆ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 14 ಮೇ 2022, 2:20 IST
ಅಕ್ಷರ ಗಾತ್ರ

ಕಕ್ಕರಗೋಳ (ಕಾರಟಗಿ): ತುಂಗಭದ್ರ ನದಿ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆದು, ಸರ್ಕಾರಕ್ಕೆ ರಾಜಸ್ವ ಸಂಗ್ರಹವಾಗುವಂತೆ ಮಾಡಲಾಗುವುದು. ಸ್ಥಳೀಯರ ಹಿತರಕ್ಷಣೆ ಕಾಪಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಜನರು ಸರ್ಕಾರದ ನಿರ್ಧಾರಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿಕಾಶ ಕಿಶೋರ್ ಸುರಳ್ಕರ್ ಹೇಳಿದರು.

ತಾಲ್ಲೂಕಿನ ಕಕ್ಕರಗೋಳ ಗ್ರಾಮದಲ್ಲಿಯ ತುಂಗಭದ್ರ ನದಿ ದಡದ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದರು.

ನಂದಿಹಳ್ಳಿ ಮತ್ತು ಕಕ್ಕರಗೋಳ ಗ್ರಾಮದ ತುಂಗಭದ್ರ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಕ್ರಮ ಮರಳುಗಾರಿಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸರ್ಕಾರಕ್ಕೆ ಸೇರಬೇಕಾದ ರಾಜಸ್ವ ಅಕ್ರಮ ಸಾಗಾಣಿಕೆದಾರರ ಪಾಲಾಗುತ್ತಿದೆ. ಇದೆಲ್ಲವುದನ್ನು ಗಮನಿಸಿ ಸರ್ಕಾರ ಹಟ್ಟಿ ಚಿನ್ನದ ಗಣಿ ಕಂಪನಿಗೆ
ಮರಳು ಪಾಯಿಂಟ್‍ಗಳನ್ನು ಗುರುತಿಸಿ ಮರಳುಗಾರಿಕೆ ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದರು.

ವರ್ಷಕ್ಕೆ ಈ ಭಾಗದಿಂದ 3 ಲಕ್ಷ ಮೆಟ್ರಿಕ್ ಟನ್ ಮರಳುಗಾರಿಕೆ ನಡೆಯುತ್ತಿದೆ. ಮರಳುಗಾರಿಕೆಯಿಂದ ನದಿಯಲ್ಲಿನ ನೀರು ಹರಿಯುವಿಕೆಗೆ ಧಕ್ಕೆ ಆಗುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜನರ ಆಗ್ರಹ: ಸಭೆಯಲ್ಲಿ ನೆರೆದಿದ್ದ ಕಕ್ಕರಗೋಳ ಮತ್ತು ನಂದಿಹಳ್ಳಿ ಗ್ರಾಮಸ್ಥರು ಮರಳುಗಾರಿಕೆ, ಅದರಿಂದ ಉಂಟಾಗಿರುವ ಇತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆದರು. ಖಾಸಗಿ ವ್ಯಕ್ತಿಗಳು ಅಕ್ರಮ ಮರಳುಗಾರಿಕೆ ನಡೆಸುವುದರಿಂದ ರಸ್ತೆಗಳು ಹಾಳಾಗಿವೆ, ಜನರಿಗೂ ನೆಮ್ಮದಿ ಇಲ್ಲದಂತಾಗಿದೆ. ಅಕ್ರಮ ಮರಳುಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಅಕ್ರಮ ಸಾಗಣೆಯ ವಾಹನಗಳಿಂದ ಅನೇಕರು ಜೀವನ ಕಳೆದುಕೊಂಡಿದ್ದಾರೆ. ಕಕ್ಕರಗೋಳ ಮತ್ತು
ನಂದಿಹಳ್ಳಿ ಗ್ರಾಮಸ್ಥರು ಮನೆ ಕಟ್ಟಿಕೊಳ್ಳಲು ಮರಳನ್ನು ಉಚಿತವಾಗಿ ಪಡೆಯಲು ಅನುಮತಿ ನೀಡಬೇಕು ನಾಗರಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಜನರ ಅಭಿಪ್ರಾಯ ಪರಿಶೀಲಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಕೊಪ್ಪಳ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಸುರೇಶ ಮತ್ತು ಶರಣಯ್ಯ, ರಾಯಚೂರು ಹಟ್ಟಿ ಚಿನ್ನದ ಗಣಿಯ ಪರಿಸರ ಅಧಿಕಾರಿ ಶ್ರೀರಾಘವ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅನೀಲಕುಮಾರ್, ತಹಶೀಲ್ದಾರ್ ರವಿ ಎಸ್.‌ ಅಂಗಡಿ, ಗ್ರೇಡ್ 2 ತಹಶೀಲ್ದಾರ‌್ ವಿಶ್ವನಾಥ ಮುರಡಿ, ಇನ್‌ಸ್ಪೆಕ್ಟರ್‌ ವೀರಭದ್ರಯ್ಯ ಹಿರೇಮಠ, ಸಬ್‌ ಇನ್‌ಸ್ಪೆಕ್ಟರ್‌
ತಾರಾಬಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿರಾಕ್ಷಿ, ಅಭಿವೃದ್ಧಿ ಅಧಿಕಾರಿ ಜಮೀಲ್ ಅಹ್ಮದ್ ಪ್ರಮುಖರಾದ ದ್ಯಾಮಣ್ಣ, ಉಮೇಶ ನಾಯಕ, ಮುರಡಪ್ಪ, ವಿಶ್ವನಾಥಗೌಡ, ಶಿವರೆಡ್ಡಿ, ಬಸವನಗೌಡ, ಶಿವರೆಡ್ಡಿ ನಾಯಕ, ಬುಳ್ಳಪ್ಪ ನಾಯಕ, ಗವಿಯಪ್ಪ, ಹುಲುಗಪ್ಪ, ಬೀತಪ್ಪ, ಬಸವರಾಜ, ದೊಡ್ಡನಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT