ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿಗೆ ಪರಿಹಾರ ಕೊಡಿಸಲು ಯತ್ನ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಹಿರೇಹಳ್ಳ ನದಿ ಪಾತ್ರದ ಗ್ರಾಮಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಅಧಿಕಾರಿಗಳ ಭೇಟಿ, ಪರಿಶೀಲನೆ
Last Updated 22 ಮೇ 2022, 2:23 IST
ಅಕ್ಷರ ಗಾತ್ರ

ಕೊಪ್ಪಳ: ಸತತ ಎರಡು ದಿನ ಸುರಿದ ಮಳೆಗೆ ತಾಲ್ಲೂಕಿನ ಹಿರೇಹಳ್ಳ ನದಿ ಪಾತ್ರದಲ್ಲಿ ಉಂಟಾದ ಹಾನಿಯನ್ನು ಶನಿವಾರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನವ್ಯಾಪ್ತಿಯಲ್ಲಿ ಸುರಿದ ಆಕಾಲಿಕ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ಕೆಲವು ಕಡೆ ಬೆಳೆ ಹಾನಿಯಾಗಿದ್ದರೆ, ಕೆಲವು ಕಡೆ ಜಮೀನುಗಳ ಒಡ್ಡು ಕೊಚ್ಚಿಕೊಂಡು ಹೋಗಿವೆ. ನದಿಪಾತ್ರದ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಂಡಿದ್ದು, ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಎರಡು ವರ್ಷದ ಹಿಂದೆ ಹಿರೇಹಳ್ಳದ ಬ್ಯಾರೇಜ್‌ ಇರುವ ಕೋಳುರು ಗ್ರಾಮದ ಬಳಿ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದಲ್ಲದೆ, ಜಮೀನುಗಳು ಹಾಳಾಗಿ ಹೋಗಿದ್ದವು. ಪರಿಹಾರಕ್ಕಾಗಿ ರೈತರು ಆಗ್ರಹಿಸಿ ಹೋರಾಟ ಮಾಡಿದರೂ ಪರಿಹಾರ ಧನ ಬಂದಿರಲಿಲ್ಲ. ಈಗ ಮತ್ತೆ ಆ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳದ ನೀರಿನಿಂದ ಮಾದಿನೂರು-ಕಿನ್ನಾಳ ಸೇತುವೆ ಮುಳುಗಿ ಹೋಗಿದ್ದರೆ, ಶಿಂಧೋಗಿ ಬಳಿ ಕಿರು ಸೇತುವೆ ಕೊಚ್ಚಿಕೊಂಡು ಹೋಗಿದೆ. ಕೆಲವು ಬ್ಯಾರೇಜ್‌ಗಳ ಗೇಟ್ ತೆರೆಯದ ಕಾರಣ ನೀರು ಹೊಲಗಳಿಗೆ ನುಗ್ಗಿದೆ. ವಿಳಂಬ ಮಾಡಿ ಗೇಟ್‌ ತೆರೆದಿದ್ದರಿಂದ ಹಾನಿಯಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ ಸೇರಿದಂತೆ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ನಂತರ ಮಾತನಾಡಿ, ‘ಅಕಾಲಿಕ ಮಳೆಯಿಂದ ಕೆಲವು ಕಡೆ ಹಾನಿಯಾಗಿದೆ. ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ, ಹಾನಿಯ ಅಂದಾಜು ಸಲ್ಲಿಸುವಂತೆ ತಿಳಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಮಗ್ರ ವರದಿಯನ್ನು ನೀಡುವಂತೆ ತಿಳಿಸಲಾಗಿದೆ. ಎಲ್ಲವನ್ನು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತಂದು ಸಂತ್ರಸ್ತರಿಗೆ ಪರಿಹಾರಧನ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ಗ್ರಾಮಸ್ಥರು ಶಾಸಕರ ಜೊತೆ ವಾಗ್ವಾದ ನಡೆದ ಪ್ರಸಂಗ ಕೂಡಾ ನಡೆಯಿತು. ಪದೇಪದೇ ಇದೇ ಸಮಸ್ಯೆಯಾದರೆ ಹೇಗೆ ಎಂದು ಪ್ರಶ್ನಿಸಿದರು. ಮಳೆಯಾದ ನಂತರ ನಮ್ಮನ್ನು ಮರೆತು ಬಿಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರಾದ ಎಸ್.ಬಿ.ನಾಗರಳ್ಳಿ, ಭರಮಪ್ಪ ಹಟ್ಟಿ, ಕೃಷ್ಣರಡ್ಡಿ, ಗಾಳೆಪ್ಪ ಪೂಜಾರ ದದೇಗಲ್, ನಿಂಗಪ್ಪ ಯತ್ನಟ್ಟಿ, ಕೇಶವರಡ್ಡಿ, ಹನಮರಡ್ಡಿ ಅಂಗನಕಟ್ಟಿ, ವೆಂಕನಗೌಡ್ರು ಹಿರೇಗೌಡ್ರು, ಅನ್ವರ್ ಗಡಾದ, ಸಿದ್ಧಲಿಂಗಸ್ವಾಮಿ, ಮಹಾಂತೇಶ ಪಾಟೀಲ್, ವಸಂತ ಹೊರತಟ್ನಾಳ ನಿಂಗಪ್ಪ ಹೊರತಟ್ನಾಳ ಇದ್ದರು.

ಅಕಾಲಿಕ ಮಳೆಯಿಂದ ಹಾನಿ

ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ 800 ಜನ ರೈತರಿಗೆ ಸೇರಿದ 620 ಹೆಕ್ಟೇರ್ ಕೃಷಿ ಜಮೀನಿಗೆ ನೀರು ನುಗ್ಗಿ ಮತ್ತು ಕೊಚ್ಚಿಕೊಂಡು ಹೋಗಿ ₹ 64.5 ಲಕ್ಷ ಹಾನಿಯಾಗಿದೆ.

ತೋಟಗಾರಿಕೆ ಇಲಾಖೆಯ 110 ಹೆಕ್ಟೇರ್ ಪ್ರದೇಶದ ಮಾವು, ತರಕಾರಿ ಹೂವು ಸೇರಿದಂತೆ 125 ಜನ ರೈತರ ₹ 18.4 ಲಕ್ಷ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಜಿಲ್ಲೆಯಲ್ಲಿ ಒಟ್ಟು 236 ಮನೆಗಳು ಭಾಗಶಃ ಹಾನಿಗೀಡಾಗಿದ್ದರೆ 7 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. ಸಿಡಿಲು ಬಡಿದು ಒಬ್ಬರು ಮೃತರಾದರೆ, ಐದು ಜಾನುವಾರುಗಳು ಸಾವಿಗೀಡಾಗಿದ್ದಾರೆ. ಫಲಾನುಭವಿಗಳಿಗೆ ತಕ್ಷಣದಲ್ಲಿಯೇ ಸರ್ಕಾರದಿಂದ ಪರಿಹಾರಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಳೆಯಿಂದ 24 ಶಾಲಾ ಕೊಠಡಿ, 138 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 200 ಕಿ.ಮೀ ರಸ್ತೆ ಮಳೆಯಿಂದ ಹಾಳಾಗಿದ್ದು,₹ 1.20 ಕೋಟಿ ಹಾನಿಯಾಗಿದೆ. 454 ವಿದ್ಯುತ್ ಕಂಭಗಳು, 24 ಟಿಸಿಗಳು ಸೇರಿದಂತೆ 11.37 ಕಿ.ಮೀ ಉದ್ದದ ವಿದ್ಯುತ್ ಲೈನ್‌ಗಳು ಹಾಳಾಗಿವೆ. ಸಂಬಂಧಿಸಿದ ಇಲಾಖೆಗಳು ಹಾನಿಯ ಅಂದಾಜು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ಕೇಂದ್ರಸ್ಥಾನದಲ್ಲಿ ಇರಲು ಸೂಚನೆ

ಕೊಪ್ಪಳ:ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಮುಂಬರುವ ದಿನಗಳಲ್ಲಿಯೂ ಸಹ ಸತತ ಮಳೆಯಾಗುವ ಸಂಭವವಿರುತ್ತದೆ.

ಇದರಿಂದ ಉಂಟಾಗುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ ನೀಡಿದ್ದಾರೆ.

ಅನಿವಾರ್ಯ ಸಂದರ್ಭಗಳಲ್ಲಿ ಕೇಂದ್ರಸ್ಥಾನ ಬಿಡುವ ಮುನ್ನ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957 ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT