ಗಂಗಾವತಿ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ರಭಸದ ಮಳೆಗೆ ಜಂಗಮರ ಕಲ್ಗುಡಿ, ಹಣವಾಳ, ಹೊಸಕೇರಾ, ಢಣಾಪುರ, ಶ್ರೀರಾಮನಗರ ಭಾಗದಲ್ಲಿನ ಭತ್ತದ ಬೆಳೆಗಳು ನೆಲಕ್ಕೆ ಹಾಸಿಕೊಂಡು, ಕಟಾವಿಗೆ ಬರದಂತಾಗಿದೆ.
ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಬೆಳೆ ಅರ್ಧಕ್ಕೆ ಬರುವಷ್ಟರೊಳಗಡೆ ತುಂಗಾಭದ್ರ ಜಲಾಶಯದಲ್ಲಿ ನೀರಿನ ಅಭಾವ ಕಂಡು ಬಂತು. ಆದರೂ ರೈತರು ಭತ್ತದ ಬೆಳೆಗಳನ್ನ ಸೂಕ್ಷ್ಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಬರದ ಪರಿಸ್ಥಿತಿ ನಡುವೆ ಏಕಾಏಕಿ ಮಳೆಯಾಗಿದ್ದು, ಭತ್ತದ ಬೆಳೆ ಭೂಮಿಗೆ ವಾಲಿ ಕೈಗೆ ಬರದಂತಾಗಿದೆ.
ತಾಲ್ಲೂಕಿನಲ್ಲಿ ಸೋನಾಮಸೂರಿ, ಕಾವೇರಿ ಸೋನಾ, ಆರ್.ಎನ್.ಆರ್, ಬಿಪಿಟಿ ಸೋನಾ, ನೆಲ್ಲೂರು ಸೋನಾ, 1010 ಸೇರಿ ಇತರೆ ನೂರಾರು ತಳಿಯ ಭತ್ತ ಬೆಳೆದಿದ್ದು, ಈ ಮಳೆ, ಮೋಡ ಕವಿದ ವಾತಾವರಣ, ಗಾಳಿ ಬಿಸುವಿಕೆಯಿಂದ ನೆಲಕ್ಕೊರಗಿ ಮೊಳಕೆ ಒಡೆಯುವ ಹಂತಕ್ಕೆ ತಲುಪಿದೆ.
250 ಹೆಕ್ಟೇರ್ ಹಾನಿ: ಮಳೆ, ಗಾಳಿ ಪರಿಣಾಮ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತದ ಬೆಳೆಗಳು ನೆಲಕ್ಕೆ ಹಾಸಿಕೊಂಡಿದ್ದು, ಕೃಷಿ ಇಲಾಖೆ ನೇತೃತ್ವದಲ್ಲಿನ ಸಿಬ್ಬಂದಿ ನಡೆದ ಸಮೀಕ್ಷೆಯಲ್ಲಿ 250 ಹೆಕ್ಟೇರ್ ಭತ್ತದ ಬೆಳೆ ನೆಲಕ್ಕೆವಾಲಿದೆ ಎಂಬ ವರದಿಯಾಗಿದೆ.
ಬೆಳೆ ಇಳಿಕೆ ಆತಂಕ: ಸಾಣಾಪುರ, ಆನೆಗೊಂದಿ, ಮಲ್ಲಾಪುರ, ಗಂಗಾವತಿ ನಗರ, ಬಸಾಪಟ್ಟಣ, ವಡ್ಡರಹಟ್ಟಿ ಗ್ರಾಮ ಭಾಗದಲ್ಲಿ ಬೋರ್‌ವೆಲ್ ಹಾಗೂ ಕೆರೆ ನೀರಿಗೆ ಬೆಳೆದ ಭತ್ತವನ್ನ ಕಟಾವು ಮಾಡಿಕೊಂಡಿದ್ದು, ಮಳೆಯ ಕಾರಣ ಒಣಗಿಸಲು ಬಿಸಿಲು ಇಲ್ಲದೆ ಹಾಗೆ ಮುಚ್ಚಿಟ್ಟುಕೊಂಡಿದ್ದಾರೆ. ಕೆಲವೆಡೆ ಭತ್ತ ಮಳೆಯಲ್ಲಿ ಒದ್ದೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆತಂಕ ಎದುರಾಗಿದೆ.
ಬೆಳೆ ಪರಿಹಾರಕ್ಕೆ ರೈತರ ಮನವಿ: ಬುಧವಾರ ರಾತ್ರಿ ಸುರಿದ ಮಳೆಗೆ ಭತ್ತದ ಬೆಳೆಗಳು ನೆಲಕ್ಕೆ ಹಾಸಿದ ಕಾರಣ ಶ್ರೀರಾಮ ನಗರ, ಕಲ್ಗುಡಿ, ಹಣವಾಳ ಗ್ರಾಮದ ರೈತರು ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳನ್ನು ಕರೆಯಿಸಿ ಬೆಳೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ಬೆಳೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ರೈತ ರೆಡ್ಡಿಶ್ರೀನಿವಾಸ ಮಾತನಾಡಿ, ಮಳೆಗೆ ಶ್ರೀರಾಮನಗರ ವ್ಯಾಪ್ತಿಯಲ್ಲಿನ ಬಹುತೇಕ ಭತ್ತದ ಬೆಳೆಗಳು ನೆಲಕ್ಕೆ ಹಾಸಿ ಕೊಂಡಿದ್ದು, ರೈತನ ಎಕರೆ ಒಂದರಕ್ಕೆ ₹30ರಿಂದ ₹35 ಸಾವಿರ ಮೌಲ್ಯದ ಬೆಳೆ ಹಾನಿಯಾಗಿದೆ. ಇನ್ನೂ ಕಟಾವು ಹಂತಕ್ಕೆ ಬರದ ಕಾರಣ ನಿರಂತರ ಮಳೆ ಸುರಿದರೆ ಮೊಳಕೆ ಒಡೆಯುವ ಸಾಧ್ಯತೆ ಇದೆ.
ಕೆಲವು ಭತ್ತದ ಬೆಳೆ ಕಟಾವು ಹಂತಕ್ಕೆ ಬಂದಿದ್ದು, ನೆಲಕ್ಕೆ ವಾಲಿದ ಪರಿಣಾಮ ಭತ್ತದ ಕಟಾವು ಯಂತ್ರದಿಂದ ಭತ್ತ ಕಟಾವು ಮಾಡಿಸಿದರೆ, ಸಾಕಷ್ಟು ಸಮಯ ಹಿಡಿದು, ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ. ಹಾಗಾಗಿ ಮಳೆಯಿಂದ ನಷ್ಟವಾದ ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮರಳಿ ಕಂದಾಯ ಅಧಿಕಾರಿ ರಾಘವೇಂದ್ರ, ಶ್ರೀರಾಮನಗರ ಗ್ರಾಮ ಲೆಕ್ಕಾಧಿಕಾರಿ ರಾಜು, ಕೃಷಿ ಇಲಾಖೆ ಸಹಾಯಕ ಅಧಿಕಾರಿ ಅಶೋಕ, ರೈತರಾದ ವೀರಪ್ಪ, ಸಿದ್ದರಾಮಯ್ಯಸ್ವಾಮಿ, ಕೃಷ್ಣ ಕಲ್ಗುಡಿ ಕಾಂತರಾವ್, ಧನಂಜಯ ಇದ್ದರು.
Quote - ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಗಂಗಾವತಿ ತಾಲ್ಲೂಕಿನಲ್ಲಿ 250 ಹೆಕ್ಟೇರ್ ಭತ್ತದ ಬೆಳೆ ನೆಲಕ್ಕೆ ಬಿದ್ದಿದ್ದು ಇನ್ನೂ ಸಮೀಕ್ಷೆ ನಡೆಸಲಾಗು ತ್ತಿದೆ. ಸಮೀಕ್ಷೆ ಬಳಿಕ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಸಂತೋಷ ಪಟ್ಟದಕಲ್ ಕೃಷಿ ಇಲಾಖೆ ಸಹಾಯ ನಿರ್ದೇಶಕ ಗಂಗಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.