ಬುಧವಾರ, ಜುಲೈ 6, 2022
21 °C
ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯಾನ ನಿರ್ಮಾಣ

ಗ್ರಾಮ ಪಂಚಾಯಿತಿ ಆವರಣಕ್ಕೆ ಹಸಿರ ಹೊದಿಕೆ: ಮಳೆ ನೀರು ಸಂರಕ್ಷಣೆಗೆ ಯೋಜನೆ

ಮಂಜುನಾಥ್ ಎಸ್. ಅಂಗಡಿ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ಆವರಣಕ್ಕೆ ಕಾಲಿಟ್ಟರೆ ಸಾಕು ಒಂದಷ್ಟು ನೆಮ್ಮದಿ ದೊರಕುತ್ತದೆ. ಅದಕ್ಕೆ ಕಾರಣ ಉದ್ಯಾನ.

2021-22ನೇ ಸಾಲಿನ ನರೇಗಾ ಯೋಜನೆಯಡಿ ಸುಮಾರು ₹3 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ಆವರಣದಲ್ಲಿ ಉದ್ಯಾನ ನಿರ್ಮಿಸಲಾಗಿದೆ.

ಈ ಮುಂಚೆ ಖಾಲಿ ಖಾಲಿಯಾಗಿದ್ದ ಆವರಣ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಸ್ಥೆ ವಹಿಸಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯಾನ ನಿರ್ಮಾಣ ಮಾಡಿದ್ದಾರೆ.

ಆವರಣದಲ್ಲಿ 15 ಅಡಿ ಉದ್ದ ಹಾಗೂ 20 ಅಡಿ ಅಗಲದ ಜಾಗದಲ್ಲಿ ಈ ಉದ್ಯಾನ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ 204 ಮಾನವ ದಿನಗಳು ಸೃಜನೆಯಾಗಿದ್ದು, ಕಾರ್ಮಿಕರಿಗೆ ₹58960 ಕೂಲಿ ಸಿಕ್ಕಿದೆ.

ನೆರಳಿನಲ್ಲಿ ಬೆಳೆಯುವ ಸಸಿಗಳನ್ನು ನೆಡಲಾಗಿದೆ. ಉದ್ಯಾನದ ಮೂಲೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ರಾತ್ರಿ ಸಮಯದಲ್ಲಿ ಜಗಮಗಿಸುತ್ತವೆ. ಖಾಲಿ ಇದ್ದ ಜಾಗವೀಗ ಹಸಿರು ಹುಲ್ಲಿನಿಂದ ಕಂಗೊಳಿಸುತ್ತ ಪಂಚಾಯಿತಿಗೆ ಬರುವವರನ್ನು ಆಕರ್ಷಿಸುತ್ತಿದೆ.

ಬಾದಾಮಿ, ಹುಣಸೆ, ಬೇವು ಹಾಗೂ ತೋಟಗಾರಿಕೆ ಸಸಿಗಳಾದ ರಾಯಲ್ ಫಾಮ್, ಕ್ರಿಸ್ಮಸ್ ಟ್ರೀ, ರಿಬ್ಬನ್ ಗ್ರಾಸ್, ದಾಸವಾಳ, ಹಾಗೂ ನಂದಿವರ್ದನ ಹಾಗೂ ಆಲಂಕಾರಿಕ ಗಿಡಗಳನ್ನು ಹಚ್ಚಲಾಗಿದೆ. ಮುಂಬರುವ ದಿನಗಳಲ್ಲಿ ಸಸಿಗಳು ಬೆಳೆದಾಗ ಆವರಣಕ್ಕೆ ಮತ್ತಷ್ಟು ಮೆರುಗು ಬರಲಿದೆ.

‘ಗ್ರಾ.ಪಂ. ಕಟ್ಟಡಕ್ಕೆ ನರೇಗಾದಡಿ ಮಳೆ ನೀರು ಸಂರಕ್ಷಣೆ ಘಟಕ ನಿರ್ಮಾಣ ಮಾಡಲಾಗಿದೆ. ನೀರಿನ ಅಭಾವ ಸೃಷ್ಟಿಯಾದಾಗ ಈ ಘಟಕದಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಉದ್ಯಾನದ ಸಸಿಗಳಿಗೆ ನೀರುಣಿಸಲು ಬಳಸಿಕೊಳ್ಳಲು ಯೋಜಿಸಲಾಗಿದೆ’ ಎಂದು ಐಇಸಿ ಸಂಯೋಜಕ ಶರಣಪ್ಪ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು