ಸೋಮವಾರ, ಆಗಸ್ಟ್ 8, 2022
22 °C
Sadashiva report on reservation

ಸದಾಶಿವ ವರದಿ ಬಹಿರಂಗ ಚರ್ಚೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತರಾತುರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂಥಹ ಏಕಪಕ್ಷಿಯ ತೀರ್ಮಾನ ತೆಗೆದುಕೊಳ್ಳದಂತೆ ತಾಲ್ಲೂಕು ಬಂಜಾರ ಕ್ಷೇಮಾಭಿವೃದ್ಧಿ ಸೇವಾ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಈ ವಿಷಯ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಸಂಗಪ್ಪ ಲಮಾಣಿ ಅವರು, ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ವಿಷಯದಲ್ಲಿ ಸರ್ಕಾರವೂ ಪಾರದರ್ಶಕ ನೀತಿಯನ್ನು ಅನುಸರಿಸಬೇಕಾಗುತ್ತದೆ. ಆದರೆ ಕೆಲ ಶಕ್ತಿಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಇತರೆ ಜಾತಿಗಳನ್ನು ಹೊರಹಾಕುವ ದುರುದ್ದೇಶದಿಂದ ಅನಗತ್ಯ ಚರ್ಚೆಯನ್ನು ಹುಟ್ಟುಹಾಕಿವೆ. ವರ್ಗೀಕರಣ, ಕೆನೆಪದರು ಎಂಬ ವಿಷಯಗಳನ್ನು ಹರಿಬಿಟ್ಟು ಈ ಸಮುದಾಯಗಳಲ್ಲಿನ ಒಗ್ಗಟ್ಟನ್ನು ಛಿದ್ರಗೊಳಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ಆಯೋಗದ ವರದಿಯ ದೃಢೀಕೃತ ಪ್ರತಿಯನ್ನು ನೀಡಿ ಸಾರ್ವಜನಿಕರು ಅದಕ್ಕೆ ತಕರಾರು, ನ್ಯಾಯಸಮ್ಮತಿ ತಿದ್ದುಪಡಿಗೆ ಕಾಲಾವಕಾಶ ನೀಡಬೇಕು. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ ಅವರು ಮಾಡಿರುವ ಶಿಫಾರಸುಗಳನ್ನು ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು. 

ಎಲ್ಲ ಜಾತಿ ಜನಾಂಗಗಳು, ಬುಡಕಟ್ಟು ಸಮುದಾಯಗಳ ವಾಸ್ತವ ಸಂಗತಿಗಳನ್ನು ಆಧರಿಸಿ ಹಿಂದಿನ ಸರ್ಕಾರ ಸಿದ್ಧಪಡಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ಯಂಕಪ್ಪ ಲಮಾಣಿ, ತಾಲ್ಲೂಕಿನ ಲಂಬಾಣಿ ಸಮುದಾಯದ ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು