ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವಹಿವಾಟಿಗೂ ಆದ್ಯತೆ ನೀಡಿ: ಫೌಜೀಯಾ ತರನ್ನುಮ್

ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆ
Last Updated 18 ಡಿಸೆಂಬರ್ 2021, 5:32 IST
ಅಕ್ಷರ ಗಾತ್ರ

ಗಂಗಾವತಿ: ಸಂಜೀವಿನಿ ಸ್ವಯಂ ಸೇವಾ ಸಂಘದ ಸದಸ್ಯರ ಸಂತೆ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿರುವ ಚಕ್ಕಲಿ, ಶೇಂಗಾ ಹೋಳಿಗೆಯನ್ನು ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ ಸಿಇಓ ಫೌಜೀಯಾ ತರನ್ನುಮ್ ಅವರು ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಹಯೋಗದಲ್ಲಿ ಗಂಗಾವತಿ ತಾ.ಪಂ. ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆಯನ್ನು ಶಾಸಕ ಪರಣ್ಣ ಮುನವಳ್ಳಿ ಅವರು ಉದ್ಘಾಟಿಸಿ ಮಾತನಾಡಿದರು.

ಸ್ವಸಹಾಯ ಸಂಘದ ಸದಸ್ಯರು ಗುಣಮಟ್ಟದ ಆಹಾರ ಪದಾರ್ಥ ಹಾಗೂ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಆದರೆ, ಉತ್ತಮ ಮಾರುಕಟ್ಟೆ ಇಲ್ಲವಾಗಿದೆ. ಎಲ್ಲರೂ ಮಾರುಕಟ್ಟೆ ಸೃಜನೆಗೆ ಒತ್ತು ನೀಡಬೇಕು. ಬರೀ ಮೇಳಗಳಿಗೆ ಸೀಮಿತವಾಗದೆ, ಮಾರುಕಟ್ಟೆ ವಿಸ್ತಾರ ಮಾಡಿಕೊಂಡರೆ, ಆರ್ಥಿಕವಾಗಿ ಸಬಲರಾಗಬಹುದು. ಈ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಇಂದು ಟೆಕ್ನಾಲಜಿ ಬೆಳೆದಿದ್ದು, ಎಂ.ಬಿ.ಕೆ. ಸದಸ್ಯರು ಸೌಲಭ್ಯ ಸದ್ಭಳಕೆ ಮಾಡಿಕೊಂಡು ಆನ್‌ಲೈನ್ ವ್ಯಾಪಾರಕ್ಕೆ ಒತ್ತು ನೀಡಿದರೆ ತಯಾರಿಸುವ ಉತ್ಪನ್ನಗಳು ಹಾಗೂ ವಸ್ತುಗಳಿಗೆ ಬೇಡಿಕೆ ದೊರೆಯುತ್ತದೆ. ಇದರಿಂದ ಮಹಿಳೆಯರಿಗೆ ಉತ್ತಮ ಮಾರುಕಟ್ಟೆ ಸಿಗುತ್ತದೆ. ಉತ್ಪನ್ನಗಳಿಗೆ ಆಕರ್ಷಣೆ ಪ್ಯಾಕಿಂಗ್ ಮಾಡಿದರೆ ಗ್ರಾಹಕರ ಸೆಳೆಯಲು ಸಹಕಾರಿ ಆಗುತ್ತದೆ. ಈ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.

ಜಿ.ಪಂ ಸಿಇಒ ಫೌಜೀಯಾ ತರನ್ನುಮ್ ಮಾತನಾಡಿ, ಸರ್ಕಾರ ನೀಡುವ ತರಬೇತಿಗಳಲ್ಲಿ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು. ಉತ್ಪನ್ನದ ಗುಣಮಟ್ಟ, ಪ್ಯಾಕಿಂಗ್ ಚೆನ್ನಾಗಿ ಮಾಡಬೇಕು. ದರ ಪಟ್ಟಿಯನ್ನು ಹಾಕಬೇಕು ಎಂದರು.

ಸರ್ಕಾರದ ಮಾರುಕಟ್ಟೆ ಮೇಲೆ ಮಹಿಳಾ ಸದಸ್ಯರು ಅವಲಂಬಿತರಾಗದೆ ಮದುವೆ ಸಮಾರಂಭಗಳಿಗೆ ಅಗತ್ಯ ಕರಕುಶಲ ಉತ್ಪನ್ನ, ಜೊತೆಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬೇಕು. ಬರ್ತ್‌ಡೇ ಪಾರ್ಟಿಗಳಿಗೆ ಬೇಕಾಗುವ ಕೇಕ್ ತಯಾರಿಕೆ ಕಲಿತು ಸ್ಥಳೀಯವಾಗಿ ಮಾರುಕಟ್ಟೆ ವೃದ್ಧಿಸಿಕೊಳ್ಳಬೇಕು ಎಂದರು.

ಈ ವೇಳೆ ಜಿ.ಪಂ ಯೋಜನಾ ನಿರ್ದೇಶಕ ಕೃರ್ಷಮೂರ್ತಿ, ತಹಶೀಲ್ದಾರ್ ಯು.ನಾಗರಾಜ, ತಾ.ಪಂ ಇಒ ಡಾ.ಡಿ.ಮೋಹನ್, ಕಾವ್ಯರಾಣಿ ಕೆ.ವಿ., ತಾ.ಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಎನ್.ಆರ್.ಎಲ್.ಎಂ ಜಿಲ್ಲಾ ಮತ್ತು ತಾಲ್ಲೂಕು ವ್ಯವಸ್ಥಾಪಕರು ಸೇರಿದಂತೆ ತಾ.ಪಂ ಸಿಬ್ಬಂದಿ ಹಾಗೂ ಗ್ರಾ.ಪಂ ಮಟ್ಟದ ಒಕ್ಕೂಟ ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT