ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದರು: ಸಂಗಣ್ಣ ಕರಡಿ ಆಕ್ರೋಶ

Published 16 ಏಪ್ರಿಲ್ 2024, 15:03 IST
Last Updated 16 ಏಪ್ರಿಲ್ 2024, 15:03 IST
ಅಕ್ಷರ ಗಾತ್ರ

ಕೊಪ್ಪಳ: ‘ನನಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿದ ಮಹಾನಾಯಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ, ಅವರಿಗೂ ನನಗಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ನನ್ನ ಕೈ ಬಿಟ್ಟರೂ ಕೊಪ್ಪಳ ಕ್ಷೇತ್ರದ ಜನತೆ ನನ್ನ ಜತೆಗಿದ್ದಾರೆ. ನನ್ನ ಕೊನೆ ಉಸಿರಿರುವವರೆಗೂ ಜನಸೇವೆ ಮಾಡುತ್ತೇನೆ’ ಎಂದು ಸಂಸದ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಸಂಗಣ್ಣ ಕರಡಿ ಹೇಳಿದ್ದಾರೆ.

‘ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ರಾಜೀನಾಮೆ ನೀಡಿದ್ದೇನೆ. ಕಳೆದ 10 ವರ್ಷಗಳಿಂದ ಜನರ ಆಶೀರ್ವಾದದಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ. ನಾನು ಸಂಸದನಾಗುವ ಮೊದಲು ರೈಲ್ವೆ, ಹೆದ್ದಾರಿ ಹಾಗೂ ಕೇಂದ್ರ ಸರ್ಕಾರ ಸರ್ಕಾರದ ಯೋಜನೆಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪಿರಲಿಲ್ಲ. ನಾನು ಸಂಬಂಧಿಸಿದ ಕೇಂದ್ರ ಸಚಿವರನ್ನು ಸಂಪರ್ಕಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ’ ಎಂದಿದ್ದಾರೆ.

‘ಇತ್ತೀಚಿನ ರಾಜಕಾರಣ ನನಗೆ ಬೇಸರ ತರಿಸಿದ್ದು, ನನ್ನ ಸಾರ್ವಜನಿಕರ ಸೇವೆ ಗುರುತಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಕೊಪ್ಪಳದಲ್ಲಿ ಬಿಜೆಪಿ ನೆಲೆಯೂರಲು ನಾನು ಕೂಡ ಕಾರಣಿಕರ್ತ. ಪಕ್ಷದ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದೇನೆ. ಹಾಲಿ, ಮಾಜಿ ಶಾಸಕರು, ಹಿರಿಯ ಹಾಗೂ ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಜತೆಗಿದ್ದೇ ಬೆನ್ನಿಗೆ ಚೂರಿ ಹಾಕಿದ ಮಹಾ ನಾಯಕರಿಗೆ ಕೊಪ್ಪಳದ ಜನರು ತಕ್ಕ ಶಾಸ್ತಿ ಮಾಡುತ್ತಾರೆ’ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.

‘ಬಿಜೆಪಿಯಲ್ಲಿ ನನ್ನ ಸೇವೆಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಜನರು ಗುರುತಿಸಿದರೂ ಪಕ್ಷದ ನಾಯಕರು ಗುರುತಿಸಲಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ರಾಜಕೀಯವಾಗಿ ಮುಖಂಡರನ್ನು ಬೆಳೆಸಲು ಮುಂದಾಗಿದ್ದೇ ಹೊರತು ಮಟ್ಟ ಹಾಕುವ ಚಿಂತನೆಯನ್ನೇ ಮಾಡಿರಲಿಲ್ಲ. ಆದರೆ, ನನ್ನನ್ನು ಮಟ್ಟ ಹಾಕಲು ಪ್ರಯತ್ನಗಳು ನಡೆದು ಅದರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುವ ಸಮಯವನ್ನು ಕ್ಷೇತ್ರದ ಜನತೆಗೆ ಮೀಸಲಿಟ್ಟಿದ್ದರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ. ಅವರ ಸೋಲಿಗೆ ನಾನೇ ಹೊಣೆ ಎಂದು ಹಗೆ ಸಾಧಿಸಿ ಟಿಕೆಟ್ ತಪ್ಪಿಸಿದ್ದಾರೆ. ಅವರ ಕಾರ್ಯವೈಖರಿ, ಮುಖಂಡರ ಹಾಗೂ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವುದನ್ನು ನನ್ನ ಮೇಲೆ ಹಾಕಿದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT