ಮಂಗಳವಾರ, ಮಾರ್ಚ್ 28, 2023
33 °C
‘ಪರಿಸರ ಸ್ನೇಹಿ’ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕಾ ಘಟಕ ಆರಂಭ

ಋತುಚಕ್ರ ನೈರ್ಮಲ್ಯ; ಜಾಗೃತಿ ಅಗತ್ಯ- ಶಿಲ್ಪಾ ಆನಂದ ದಿವಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ‘ಮಹಿಳೆಯರ ಆರೋಗ್ಯ ಕಾಪಾಡಲು, ಉದ್ಯೋಗ ಸೃಷ್ಟಿಸಲು, ಸ್ವಾವಲಂಬಿ ಜೀವನಕ್ಕೆ ಮುಂದಾಗಲು ಸ್ಯಾನಿಟರಿ ಪ್ಯಾಡ್‌ ತಯಾರಿಕಾ ಘಟಕ ಆರಂಭಿಸಲಾಗಿದೆ. ಮಹಿಳೆಯರು ಯೋಜನೆಯ ಪ್ರಯೋಜನಕ್ಕೆ ಮುಂದಾ ಗಬೇಕು’ ಎಂದು ‘ಹೆಜ್ಜೆ’ ಮಹಿಳಾ ವಿವಿಧೋದ್ದೇಶ ಸಂಘದ ಅಧ್ಯಕ್ಷೆ ಶಿಲ್ಪಾ ಆನಂದ ದಿವಟರ್‌ ಕರೆ ನೀಡಿದರು.

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕಾ ಘಟಕದ ಆರಂಭಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆರಂಭದಲ್ಲಿ ಸಂಘದ ಸದಸ್ಯೆಯರೇ ವರ್ಷಕ್ಕೆ 50 ಸಾವಿರ ಪ್ಯಾಡ್‌ ಸಿದ್ಧಪಡಿಸುವರು. ಪುರಸಭೆಯ ಮಹಿಳಾ ಪೌರ ಕಾರ್ಮಿಕರು, ಅಧಿಕಾರಿ, ಸಿಬ್ಬಂದಿಗೆ ಉಚಿತವಾಗಿ ಪ್ಯಾಡ್‌ ವಿತರಿಸಲಾಗುವುದು. ಬೇಡಿಕೆ ಹೆಚ್ಚಿದಂತೆ ಇತರ ಮಹಿಳೆಯರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದರು.

‘ಗ್ರಾಮೀಣ ಪ್ರದೇಶದ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಸಿಕ್ಕ, ಸಿಕ್ಕ ಬಟ್ಟೆಗಳನ್ನು ಧರಿಸಿ, ಆರೋಗ್ಯ ಕೆಡಿಸಿಕೊಳ್ಳುತ್ತಿದ್ದು, ಅವರಲ್ಲಿ ಜಾಗೃತಿ ಮೂಡಿಸಿ, ಸುರಕ್ಷಿತ ಪ್ಯಾಡ್‌ ಬಳಸಲು ಅರಿವು ಮೂಡಿಸಲಾಗುವುದು. ದಾನಿಗಳು ಮುಂದಾದರೆ  ಮಹಿಳೆಯರಿಗೆ ಉಚಿತವಾಗಿ ಪ್ಯಾಡ್‌ ವಿತರಿಸುವ ಉದ್ದೇಶವಿದೆ. ಕನಿಷ್ಠ ಬೆಲೆಯಲ್ಲೂ ಮಾರಾಟ ಮಾಡುವ ಉದ್ದೇಶವಿದೆ. ಸರ್ಕಾರದ ಸಹಾಯ ಧನದ ಪ್ರಯೋಜನೆಯು ಈ ತಯಾರಿಕಾ ಘಟಕಕ್ಕೆ ದೊರಕಿದೆ’ ಎಂದರು.

‘ಸದಾ ಹೊಸತನದ ಕಾರ್ಯಕ್ರಮ ಆಯೋಜಿಸಿ ಮಹಿಳೆಯರ ಹಿತ ರಕ್ಷಣೆಗೆ ಬದ್ದರಾಗಿ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಸಮುದಾಯದ ಪ್ರೋತ್ಸಾಹದ ನಡೆ, ನುಡಿ ತಮ್ಮಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಮಹಿಳಾ ಬಹುಪಯೋಗಿ ಕಾರ್ಯಕ್ರಮ ಆಯೋಜಿಸುವ ಸದುದ್ದೇಶ ಇದೆ’ ಎಂದು ದಿವಟರ್‌ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಮಾತನಾಡಿ, ಮಹಿಳಾ ಹಿತ ರಕ್ಷಣೆಯ ಕಾರ್ಯಕ್ಕೆ ತಮ್ಮೆಲ್ಲಾ ಸಹಕಾರ, ಪ್ರೋತ್ಸಾಹ ದೊರೆಯಲಿದೆ. ವೈಯಕ್ತಿಕವಾಗಿ 25 ಮಹಿಳೆಯರನ್ನು ದತ್ತು ಪಡೆದು ವರ್ಷದವರೆಗೆ ಪ್ಯಾಡ್‌ನ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರಲ್ಲದೇ ಪುರಸಭೆಯಿಂದ ಸಿಗುವ ಇತರೆಲ್ಲಾ ಸೌಕರ್ಯ ಒದಗಿಸಲು ತಾವು ಬದ್ಧ ಎಂದರು.

ಬಿಜೆಪಿ ಮುಖಂಡ ಟಿ.ವಿ.ಉಮೇಶ ಸಜ್ಜನ್‌ ಮಾತನಾಡಿ, ‘ಮಹಿಳೆಯರಿಗೆ ಕರಾಟೆ, ಆರೋಗ್ಯ, ಸುರಕ್ಷತೆ, ಹಕ್ಕುಗಳ ರಕ್ಷಣೆಗೆ ಹೆಜ್ಜೆ ಸಂಘಟನೆ ಮುಂದಾಗಿ, ಹೊಸ ಹೆಜ್ಜೆಯನ್ನಿಟ್ಟಿದೆ.  ವೈಯಕ್ತಿಕವಾಗಿ 10 ಮಹಿಳೆಯರಿಗೆ ಒಂದು ವರ್ಷದವರೆಗೆ ಪ್ಯಾಡ್‌ ಉಚಿತ ವಾಗಿ ನೀಡಲಾಗುವುದು‘ ಎಂದರು.

ಶಾಸಕ ಬಸವರಾಜ ದಢೇಸುಗೂರ ಘಟಕಕ್ಕೆ ಚಾಲನೆ ನೀಡಿದರು.

ಪ್ರಮುಖರಾದ ಶೀಲಾ ಸಜ್ಜನ್‌, ಪೂಜಾ ಪಾಟೀಲ್‌, ಶಕುಂತಲಾ, ಹಂಪಮ್ಮ, ಹರ್ಷಿತಾ ಭಂಡಾರಿ, ರತ್ನಾ ಬಪ್ಪೂರ, ಜ್ಯೋತಿ ಹಿರೇಮಠ, ಸುಮಾ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು