ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು; ಆರತಿ ಬೆಳಗಿ, ಪುಷ್ಪವೃಷ್ಟಿ ಮೂಲಕ ಸ್ವಾಗತ

6ರಿಂದ 8ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ
Last Updated 7 ಸೆಪ್ಟೆಂಬರ್ 2021, 4:02 IST
ಅಕ್ಷರ ಗಾತ್ರ

ಕೊಪ್ಪಳ: ಸರ್ಕಾರದ ಆದೇಶದಂತೆ 6ರಿಂದ 8ನೇ ತರಗತಿ ಸೋಮವಾರ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಶಾಲಾ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

ಶಾಲೆಗೆ ಬಂದ ಮಕ್ಕಳಿಗೆ ದೇಹದ ಉಷ್ಣತೆ ಪರೀಕ್ಷಿಸುವ ಆಕ್ಸಿಮೀಟರ್‌ ಮೂಲಕ ಪರೀಕ್ಷೆ ನಡೆಸಿ ಹೂಮಳೆಗರೆದು ಸ್ವಾಗತಿಸಿದರೆ, ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಮಾಸ್ಕ್‌ ನೀಡಿ ಸ್ವಾಗತಿಸಲಾಯಿತು. ಕೋವಿಡ್‌-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಶಾಲೆಗಳನ್ನು ಸ್ಯಾನಿಟೈಜೇಶನ್‌ ಮಾಡಲಾಗಿತ್ತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದ ಲಾಕ್‌ಡೌನ್‌ ಆಗಿ ಶಾಲೆಗಳು ಬಂದ್‌ ಆಗಿದ್ದವು. ಆನ್‌ಲೈನ್‌, ಆಫ್‌ಲೈನ್‌ ತರಗತಿ ಎಂದು ಮಕ್ಕಳು ಪರದಾಡುತ್ತಿದ್ದರು. ಗ್ರಾಮೀಣ ಭಾಗದ ಮಕ್ಕಳಂತೂ ಶಾಲೆ ಇಲ್ಲದೆ, ಮೊಬೈಲ್‌ ಇಲ್ಲದೆ ಪರದಾಡಿದ್ದರು. ಬಹುದಿನಗಳ ನಂತರ ಶಾಲೆ ಆರಂಭವಾಗಿದ್ದರಿಂದ ಮಕ್ಕಳು ಸಂಭ್ರಮದಿಂದ ಶಾಲೆಗೆ ಬರುತ್ತಿರುವುದು ಕಂಡು ಬಂತು. ಇದರಿಂದ ಶಾಲೆ ಆವರಣ ಮಕ್ಕಳಿಂದ ತುಂಬಿ ಹೋದವು.

ನಗರದ ಗಾಂಧಿನಗರದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವನಗೌಡ ಪಾಟೀಲ್‌ ಹಲಗೇರಿ ಗುಲಾಬಿ ಹೂವು ನೀಡಿ ಸ್ವಾಗತಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗೆ ಬರುವ ಮಕ್ಕಳು ಬಹುತೇಕ ಗ್ರಾಮೀಣ, ಬಡ ಮತ್ತು ಮಧ್ಯಮವರ್ಗದ ಮಕ್ಕಳೇ ಇರುತ್ತಾರೆ. ಅವರು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ತೊಂದರೆಯಿದೆ. ಈಗ ಶಾಲೆ ಆರಂಭ ಮಾಡಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಕೊರೊನಾ ನಿಯಮದ ಪ್ರಕಾರ ಮಕ್ಕಳ ರಕ್ಷಣೆಯೊಂದಿಗೆ ಪಾಠ ಬೋಧನೆ ಮಾಡಲಾಗುವುದು ಎಂದರು.

ನಗರದಸಿಪಿಎಸ್ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಶಾಲೆಯ ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಮಾತನಾಡಿ, ಕಳೆದ 6 ತಿಂಗಳುಗಳಿಂದ ವಿದ್ಯಾರ್ಥಿಗಳು ಇಲ್ಲದೇ ಶಾಲೆಯು ಭಣಗುಡುತ್ತಿತ್ತು. ಇಂದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿರುವುದು ಶಿಕ್ಷಕರ ಸಮುದಾಯಕ್ಕೆ ಸಂತೋಷ ಸಂಗತಿಯಾಗಿದೆ ಎಂದರು.

ಶ್ರಾವಣ ಕಡೆಯ ಸೋಮವಾರ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಉತ್ಸವಗಳು ಇರುವ ಹಿನ್ನೆಲೆಯಲ್ಲಿ ಶೇ 50ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದರು. ಈ ಕುರಿತು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, 'ಶಾಲೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಎಲ್ಲ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದು, ಮಕ್ಕಳ ಹಾಜರಾತಿ ಮತ್ತು ಸುರಕ್ಷತೆ ಕಡ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕೆಲವು ಶಾಲೆಗಳಲ್ಲಿ ಉತ್ಸಾಹಿ ಶಿಕ್ಷಕ ವರ್ಗ ತಳಿರು, ತೋರಣ, ಸುಣ್ಣ, ಬಣ್ಣ ಹಚ್ಚಿ ಶಾಲೆಗಳಿಗೆ ಮೆರುಗು ತಂದರಲ್ಲದೆ ನೋಟ್‌ಬುಕ್‌, ಪಠ್ಯ ಪುಸ್ತಕ, ಪೆನ್ ವಿತರಿಸಿದರು.

ಅಳವಂಡಿ: ಶಾಲೆ ಆರಂಭ, ಸಂತಸ

ಅಳವಂಡಿ: 6ರಿಂದ 8ನೇ ತರಗತಿಗಳು ಸೋಮವಾರ ಆರಂಭವಾಗಿದ್ದು ಇದರಿಂದ ಮಕ್ಕಳಲ್ಲಿ ಸಂತಸ ತಂದಿದೆ.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಲವಲವಿಕೆಯಿಂದ ಹಾಜರಾಗುವುದು ಕಂಡು ಬಂತು. ಶಾಲೆಯಲ್ಲಿ ಶೇ 60 ರಷ್ಟು ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಶಾಲೆಗೆ ಅಳವಂಡಿ ವಲಯದ ಶಿಕ್ಷಣ ಸಂಯೋಜಕ ಸಿದ್ದು ಶೆಟ್ಟರ್ ಭೇಟಿ ನೀಡಿ, ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಶಾಲೆಗಳನ್ನು ಪ್ರಾರಂಭ ಮಾಡಲಾಗಿದ್ದು, ತರಗತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಅಂತರ ಕಾಪಾಡಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ನೀಲನಗೌಡ ಹಾಗೂ ಶಿಕ್ಷಕರು ಇದ್ದರು.

ತಾವರಗೇರಾ: ಹೂಗುಚ್ಛ ನೀಡಿ ಸ್ವಾಗತ

ತಾವರಗೇರಾ: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಮಾಧ್ಯಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಸೋಮವಾರ ಶಿಕ್ಷಕರು ಮತ್ತು ಎಸ್ಡಿಎಂಸಿ ಸದಸ್ಯರು ಸ್ವಾಗತ ಕೋರಿದರು.

ಕಳೆದ ಒಂದು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ಹೋಗದ ವಿದ್ಯಾರ್ಥಿಗಳಿಗೆ 6ನೇ, 7ನೇ ತರಗತಿಗಳು ಆರಂಭವಾಗಿವೆ. ಸರ್ಕಾರದ ಕೊವೀಡ್ ನಿಯಮಾವಳಿ ಆಧರಿಸಿ, ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಶಾಲೆಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ನಂತರ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಸರ್ಕಾರದ ನಿಯಮಕ್ಕನುಸಾರವಾಗಿ ತರಗತಿಗಳನ್ನು ನಡೆಸಿದರು . ಶಾಲಾ ಆವರಣದ ಮುಖ್ಯ ದ್ವಾರದಲ್ಲಿ ತೆಂಗಿನಗರಿ ಮತ್ತು ಹೂಗುಚ್ಚದೊಂದಿಗೆ ಶೃಂಗಾರಗೊಂಡ ದೃಶ್ಯವು ಆಕರ್ಷಕವಾಗಿತ್ತು.

ಮುಖ್ಯ ಶಿಕ್ಷಕ ಈರಪ್ಪ ಸೂಡಿ, ಶಿಕ್ಷಕರಾದ ಶ್ಯಾಮಣ್ಣ ಉಪ್ಪಾರ, ಶರಣಬಸವ ದಂಡಿನ್, ಮಲಂಗಸಾ ವಾಲೇಕಾರ, ಪರಸಪ್ಪ ಹೊಸಮನಿ, ಬಸಮ್ಮ ಕೆಂಭಾವಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT