ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಸರ್ವರ್‌ ಸಮಸ್ಯೆ ನಡುವೆಯೂ ‘ಗೃಹಲಕ್ಷ್ಮೀ’ ಭಾಗ್ಯ

ಮೊದಲ ದಿನಕ್ಕಿಂತ ಉತ್ತಮ, ನೋಂದಣಿ ಕೇಂದ್ರಗಳ ಮುಂದೆ ಕಾದುಕುಳಿತ ಮಹಿಳೆಯರು
Published 21 ಜುಲೈ 2023, 15:41 IST
Last Updated 21 ಜುಲೈ 2023, 15:41 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯ ಸರ್ಕಾರವು ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹2,000 ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಲಭಿಸಿ ಎರಡು ದಿನಗಳಾಗಿದ್ದು, ಸರ್ವರ್‌ ಸಮಸ್ಯೆ ಕಾಡುತ್ತಲೇ ಇದೆ. ಮೊದಲ ದಿನ ವ್ಯಾಪಕವಾಗಿದ್ದ ಈ ಸಮಸ್ಯೆ ಎರಡನೇ ದಿನವಾದ ಶುಕ್ರವಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು.

ಕೊಪ್ಪಳ ನಗರ ಮತ್ತು ಜಿಲ್ಲೆಯ ತಾಲ್ಲೂಕು ಪ್ರದೇಶಗಳಲ್ಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೋಂದಣಿ ಕೇಂದ್ರಗಳ ಮುಂದೆ ಗಂಟೆಗಟ್ಟಲೇ ಕಾಯಬೇಕಾಯಿತು. ಇನ್ನು ಕೆಲವು ಕಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಫಲಾನುಭವಿಗಳ ನೋಂದಣಿ ಮಾಡಿಸಿದರು.

ಶುಕ್ರವಾರ ಜಿಲ್ಲೆಯಲ್ಲಿ ಯಲಬುರ್ಗಾ 4,575, ಕುಷ್ಟಗಿ 1,937, ಕೊಪ್ಪಳ 2,623, ಗಂಗಾವತಿ 1,349, ಕನಕಗಿರಿ 1,875 ನೋಂದಣೆಯಾಗಿವೆ ಎಂದು ಇಲಾಖೆಯು ಮಾಹಿತಿ ನೀಡಿದೆ. ರಾತ್ರಿ ತನಕವೂ ನೋಂದಣಿ ಕಾರ್ಯ ಪ್ರಗತಿಯಲ್ಲಿತ್ತು. ಎರಡನೇ ದಿನ ಜಿಲ್ಲೆಯಲ್ಲಿ ಒಟ್ಟು 12,359 ಜನ ಹೆಸರು ನೋಂದಾಯಿಸಿದ್ದಾರೆ. ಮೊದಲ ದಿನ 1,561 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು.    

ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ಡಿಬಿಟಿ ಮೂಲಕ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅರ್ಹ ಅರ್ಜಿದಾರರಾದ ಯಜಮಾನಿಯ ಪಡಿತರ ಕಾರ್ಡ್‌, ಅರ್ಜಿದಾರರ ಮತ್ತು ಪತಿಯ ಆಧಾರ್ ಕಾರ್ಡ್, ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಯ ವಿವರ ಬೇಕಾಗುತ್ತದೆ.

ಈ ಯೋಜನೆಯ ಸೌಲಭ್ಯವನ್ನು ಜನರಿಗೆ ತಲುಪಿಸಲು ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು 197 ಗ್ರಾಮ ಒನ್‌ ಕೇಂದ್ರಗಳು, 153 ಬಾಪೂಜಿ ಸೇವಾ ಕೇಂದ್ರಗಳು ಸೇರಿ ಒಟ್ಟು ಜಿಲ್ಲೆಯ 389 ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದೆ. ಗೊಂದಲಗಳಿದ್ದರೆ ಸಹಾಯವಾಣಿ 1902 ಕರೆ ಮಾಡಬಹುದಾಗಿದೆ.

ಮಂಜೂರಾತಿಯ ನಂತರ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸೌಲಭ್ಯ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಕಚೇರಿ, ಹಾಗೂ ಜಿಲ್ಲೆಯ 5 ಯೋಜನೆಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ (ಪ್ರಭಾರ) ಗಂಗಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3,56,566 ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳಿದ್ದು, ಅದರಲ್ಲಿ 37,573 ಎ.ಎ.ವೈ, 27,284 ಎಪಿಎಲ್ ಮತ್ತು 2,91,699 ಬಿಪಿಎಲ್‌ ಕಾರ್ಡ್‌ ಹೊಂದಿದವರು ಇದ್ದಾರೆ. ಇದರಲ್ಲಿ ಯಜಮಾನ, ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ ಪಾವತಿದಾರರಾಗಿದ್ದರೆ ಅವರು ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಚಾಲನೆ ನೀಡಿದರು
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಚಾಲನೆ ನೀಡಿದರು

ಜಿಲ್ಲೆಯಲ್ಲಿ ಒಟ್ಟು 1850 ಅಂಗನವಾಡಿ ಕೇಂದ್ರಗಳಲ್ಲಿ 1808 ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮನೆಗೆ ಭೇಟಿ ಮಾಡಿ ವೇಳಾಪಟ್ಟಿಯ ಪ್ರಕಾರ ನೋಂದಣಿ ಮಾಡಲಿದ್ದಾರೆ

-ಗಂಗಪ್ಪ ಪ್ರಭಾರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ

ಗೃಹಲಕ್ಷ್ಮೀ ಯೋಜನೆಗೆ ಸಹಾಯವಾಣಿ  ಕಚೇರಿ;ಮೊಬೈಲ್‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಕೊಪ್ಪಳ; 91104 81302 97387 58256 99020 61530 ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ;91132 84639 ಗಂಗಾವತಿ;72593 51515 ಕುಷ್ಟಗಿ;72048 61203 ಯಲಬುರ್ಗಾ;81057 29581 ಕನಕಗಿರಿ;99026 51753

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT