ಕೊಪ್ಪಳ: ‘ಭಾರತದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಗಂಡು ಮಗುವಿನ ಹಂಬಲವಾಗಿದೆ. ಭ್ರೂಣ ಪತ್ತೆ ಮಾಡಿದ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ರೇಖಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ‘ಹೆಣ್ಣುಮಕ್ಕಳ ಬಗ್ಗೆ ನಿರ್ಲಕ್ಷತನ, ಪುರುಷ ಪ್ರಧಾನ ಕುಟುಂಬ ಹಾಗೂ ತಂತ್ರಜ್ಞಾನ ಬೆಳವಣಿಗೆಯಿಂದ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗಿನ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗಂಭೀರವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದರು.
’ಹೆಣ್ಣು ಭ್ರೂಣ ಪತ್ತೆ ಮಾಡಿದವರಿಗೆ ಮೊದಲಿನ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ, ಎರಡನೇ ಅಪರಾಧಕ್ಕೆ ಐದು ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಮಾತನಾಡಿ ‘ವಿಶ್ವದಲ್ಲಿ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ. ಅಜ್ಞಾನ, ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಜನನಗಳ ನಡುವೆ ಅಂತರವಿಲ್ಲದಿರುವುದು, ಮಾಹಿತಿ ಕೊರತೆ ಮತ್ತು ಗಂಡು ಮಗು ಬೇಕು ಎನ್ನುವ ಹಂಬಲ ಹೆಚ್ಚಾಗಿರುವುದು ಪ್ರಮುಖ ಕಾರಣವಾಗಿದೆ’ ಎಂದರು.
‘ಕೊಪ್ಪಳ ಜಿಲ್ಲೆಯ ಲಿಂಗಾನುಪಾತದ ಅಂಕಿ ಅಂಶ 2021ನೇ ಇಸವಿಯಲ್ಲಿ 1000 ಪುರುಷರಿಗೆ 986 ಮಹಿಳೆಯರು, 2020-21ರಲ್ಲಿ ಜನಿಸಿದ ಮಕ್ಕಳ ಲಿಂಗಾನುಪಾತ 941 ಇದೆ. ಸರ್ಕಾರ ನಿಗ ಪಡಿಸಿದ ವಯಸ್ಸಿಗೆ ಪಾಲಕರು ಮದುವೆ ಮಾಡಬೇಕು. ತಮ್ಮ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸಲು ಅವರಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದಾ ಮಳಗಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ್ ಎಂ.ಎಚ್., ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠನಾಧಿಕಾರಿ ಡಾ.ನಂದಕುಮಾರ, ಡಾ.ವೆಂಕಟೇಶ, ಡಾ. ಶಶಿಧರ, ಡಾ.ರಮೇಶ ಮೂಲಿಮನಿ, ತಾಲ್ಲೂಕು ಆರೋಗ್ಯಧಿಕಾರಿ ಡಾ.ರಾಮಾಂಜನೇಯ, ಡಾ.ಆನಂದ, ಡಾ.ಶರಣಪ್ಪ, ಡಾ.ಸುಮಾ, ಡಾ.ದಯಾನಂದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.