ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ ಇಲ್ಲದೇ ಲಾಕ್‍ಡೌನ್ ಘೋಷಣೆ: ಸಿದ್ಧರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ
Last Updated 3 ಜೂನ್ 2020, 15:49 IST
ಅಕ್ಷರ ಗಾತ್ರ

ಯಲಬುರ್ಗಾ (ಕೊಪ್ಪಳ): ಪ್ರಧಾನಿ ಮೋದಿಯವರು ಪೂರ್ವ ಸಿದ್ಧತೆಯಿಲ್ಲದೇ ಲಾಕ್‍ಡೌನ್ ಘೋಷಿಸಿದ್ದರ ಪರಿಣಾಮ ಅಸಂಘಟಿತ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದಲ್ಲಿ ಬುಧವಾರ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಬಡವರಿಗೆ 5 ಸಾವಿರ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಯಾವ ರೀತಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಪೂರ್ವನಿಯೋಜಿತ ಯೋಚನೆ ಮಾಡದೇ ಕೈಗೊಂಡ ತೀರ್ಮಾನದಿಂದ ಬಹುವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುಬೇಕಾಯಿತು ಎಂದರು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಜನರಿಗೆ ಸ್ಪಂದಿಸಿದ್ದು ಕೇವಲ ಶೇ 10ರಷ್ಟು, ಉಳಿದ ಶೇ 90 ರಷ್ಟು ಸಂಘ ಸಂಸ್ಥೆಗಳು, ರಾಜಕಾರಣಿಗಳು ಹಾಗೂ ಮಠಮಾನ್ಯಗಳು ಸ್ಪಂದಿಸಿವೆ. ಇವರಿಗೆ ಎಲ್ಲರೂ ಕೃತಜ್ಞತೆ ಸಲ್ಲಿಸಬೇಕೆ ಹೊರೆತು ಸರ್ಕಾರಕ್ಕಲ್ಲ ಎಂದರು.

ಬೆಂಗಳೂರಿನಲ್ಲಿಯೇ ಸುಮಾರು 22 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಸರ್ಕಾರ ದಿನಸಿ ಕಿಟ್ ಕೊಟ್ಟಿದ್ದು ಕೇವಲ 3 ಲಕ್ಷ ಕಾರ್ಮಿಕರಿಗೆ ಮಾತ್ರ. ಆದರೆ, ಉಳಿದವರಿಗೆ ದೇಣಿಗೆ ನೀಡಿದ್ದು ಸಂಘ ಸಂಸ್ಥೆಯವರು ಇವರನ್ನು ಕಾಂಗ್ರೆಸ್ ಪಕ್ಷ ಅಭಿನಂದಿಸುತ್ತದೆ ಎಂದರು.

‘ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆ, ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಡಿತರ ಕಾರ್ಡ್‍ಗಳಿಗೆ ಉಚಿತ ಅಕ್ಕಿ ಹಂಚಿಕೆ, ಮಕ್ಕಳಿಗೆ ಹಾಲು ವಿತರಣೆ ಈ ಯೋಜನೆಗಳಿಂದಾಗಿಯೇ ಲಾಕ್‍ಡೌನ್ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿದೆ. ಹಾಗೆಯೇ ಉದ್ಯೋಗವಿಲ್ಲದೇ ಕಂಗೆಟ್ಟಿದ್ದ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಸಿಕ್ಕಂತಾಗಿದೆ. ಆಡಳಿತ ನಡೆಸುವವರಿಗೆ ದೃಷ್ಟಿಯಿದ್ದರೆ ಸಾಲದು ದೂರದೃಷ್ಟಿಯಿರಬೇಕು‘ ಎಂದರು.

30 ವರ್ಷಗಳಿಂದಲೂ ರಾಜಕೀಯದಲ್ಲಿ ಇರುವ ಬಸವರಾಜ ರಾಯರಡ್ಡಿಯವರು ಸೋತಿದ್ದು ಕ್ಷೇತ್ರಕ್ಕೆ ನಷ್ಟವಾಗಿದೆ. ಅವರಿಗೆ ಇನ್ನೂ ರಾಜಕೀಯ ಮಾಡಲು ವಯಸ್ಸಿದೆ. ರಾಯರಡ್ಡಿಯವರನ್ನು ಯಾವುದೇ ಕಾರಣಕ್ಕೂ ಕೈ ಬಿಡಬೇಡಿ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಈ ಹಿಂದೆ 6 ಸಾವಿರ ದಿನಸಿ ಕಿಟ್ ವಿತರಣೆ ಮಾಡಿದ ವೇಳೆ ಹೇಳಿದಂತೆ ಮತ್ತೆ ಸಾಯಿ ಟ್ರಸ್ಟ್ ಸಂಸ್ಥೆಯಿಂದ ಮತ್ತೆ 5 ಸಾವಿರ ದಿನಸಿ ಕಿಟ್‌ಗಳನ್ನು ಕ್ಷೇತ್ರದ ಬಡವರಿಗೆ ವಿತರಿಸಲಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸ್ವಾಗತಿಸಿದರು.

ಸಾಯಿ ಟ್ರಸ್ಟ್‍ನ ಆನಂದಕುಮಾರ, ಜಯಪ್ರಕಾಶ ತಲ್ಲಂ, ಸಂತೋಷ, ಕಿರಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ಭೈರತಿ ಸುರೇಶ, ರಾಘವೇಂದ್ರ ಹಿಟ್ನಾಳ ವೇದಿಕೆಯಲ್ಲಿದ್ದರು. ಕಳಕಪ್ಪ ಕಂಬಳಿ, ಶಿವಣ್ಣ ರಾಯರಡ್ಡಿ, ವೀರಣ್ಣ ಹಳ್ಳಿಕೇರಿ, ರೇವಣಪ್ಪ ಸಂಗಟಿ, ರಾಘಣ್ಣ ಗುನ್ನಾಳ, ಯಂಕಣ್ಣ ಯರಾಶಿ, ಮಂಜಪ್ಪ ಕಡೆಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT