ಕೊಪ್ಪಳ: ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಏಳಿಗೆ ಹಾಗೂ ಸಿದ್ದರಾಮಯ್ಯ ಅವರ ಗಟ್ಟಿತನ ಸಹಿಸಲಾಗಿದೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ. ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಅವರ ಏಳಿಗೆ ಸಹಿಸದೇ ಬಿಜೆಪಿ ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡುತ್ತಿದೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಹೆಸರಿಗೆ ಕೆಟ್ಟ ಹೆಸರು ತರಲು ಉಭಯ ಪಕ್ಷಗಳು ಕುತಂತ್ರ ಮಾಡುತ್ತಿವೆ. ಯಾರು ಏನೇ ಕುತಂತ್ರ ಮಾಡಿದರೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.
ಪಾದಯಾತ್ರೆ ಮಾಡುತ್ತಿರುವುದೇ ಅಪ್ರಸ್ತುತ, ವಾಲ್ಮೀಕಿ ನಿಗಮದ ಹಗರಣದಲ್ಲಿ ತಪ್ಪು ಮಾಡಿದವರ ವಿರುದ್ಧ ನಮ್ಮ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ನಮ್ಮ ಸರ್ಕಾರದ ವಿರುದ್ದ ಮಾತನಾಡಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೆ ಯಾವುದೇ ವಿಷಯವಿಲ್ಲ. ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿವೆ. ಜನರಿಗೆ ನಮ್ಮ ಅರ್ಕಾರದ ಮೇಲೆ ಒಲವು ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದು, ಇದನ್ನು ರಾಜ್ಯದ ಜನ ತೀಕ್ಷ್ಣವಾದ ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದು, ಯಾರು ಎಷ್ಟೇ ಪಾದಯಾತ್ರೆ ಮಾಡಿದರೂ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.