ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result | ಅಳವಂಡಿ: ಕೊರತೆಗಳ ನಡುವೆಯೂ ಕಂಗೊಳಿಸಿದ ಶಾಲೆ, ಶೇ 100 ಫಲಿತಾಂಶ

ಎಸ್‌ಎಸ್‌ಲ್‌ಸಿ ಫಲಿತಾಂಶದಲ್ಲಿ ಹನಕುಂಟಿ ಶಾಲೆಯ ಉತ್ತಮ ಸಾಧನೆ
Published 19 ಮೇ 2024, 7:48 IST
Last Updated 19 ಮೇ 2024, 7:48 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಹನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡುತ್ತಿದೆ.

ಹನಕುಂಟಿ - ಬೆಟಗೇರಿ  ಗ್ರಾಮದ ನಡುವೆ  ಹೊರವಲಯದಲ್ಲಿ ಸುಮಾರು 10 ಎಕರೆ ಪ್ರದೇಶದ ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯು 2023-24ನೇ ಸಾಲಿಗೆ ಶಾಲೆಯ ಹದಿನೈದನೇ ಬ್ಯಾಚ್ ಹೊರಗೆ ಹೋಗುತ್ತಿದೆ. ಎರಡರಿಂದ 5ನೇ ಬ್ಯಾಚ್ ವರೆಗೆ ಶೇ100 ಫಲಿತಾಂಶ ಪಡೆದಿವೆ. 8ನೇ ಬ್ಯಾಚ್‌ನಿಂದ 15ನೇ ಬ್ಯಾಚ್‌ವರೆಗಿ ಎಲ್ಲ ವಿದ್ಯಾರ್ಥಿಗಳು ಉತ್ತೀಣರಾಗಿ ಶಾಲೆ ಶೇ100 ಫಲಿತಾಂಶ ತಂದು ಕೊಟ್ಟಿದ್ದು ವಸತಿ ಶಾಲೆಗಳಲ್ಲಿ ರಾಜ್ಯಕ್ಕೆ 37ನೇ ಸ್ಥಾನ ಹಾಗೂ ಜಿಲ್ಲೆಗೆ 3ನೇ ಸ್ಥಾನ ಪಡೆದಿದೆ.

ಶಾಲೆಯಲ್ಲಿ 6ನೇ ತರಗತಿಯಿಂದ ಮೆಟ್ರಿಕ್‌ ವರೆಗೆ 249 ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮಕ್ಕಳ ಓದಿನ ಬಗ್ಗೆ ನಿಗಾ ವಹಿಸುತ್ತಾರೆ. ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ ತೆಗೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಅವರಿಗೆ ನೈತಿಕ, ಮಾನಸಿಕ ಹಾಗೂ ಶೈಕ್ಷಣಿಕ ಶಿಕ್ಷಣ ನೀಡುವ ಮೂಲಕ ಪ್ರತಿ ಶಿಕ್ಷಕರಿಗೂ ದತ್ತು ತೆಗೆದುಕೊಂಡಿದ್ದಾರೆ.

ವಾರಕ್ಕೊಮ್ಮೆ ವಿಷಯವಾರು ಕಿರು ಪರೀಕ್ಷೆ, ಕಲಿಕಾ ಮಟ್ಟ ಸುಧಾರಣೆಗೆ ವಿಶೇಷ ಕಾಳಜಿ ಹಾಗೂ ತರಗತಿ ತೆಗೆದುಕೊಳ್ಳಲಾಗುತ್ತದೆ. ಪಠ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ಮಕ್ಕಳಿಂದ ಪ್ರತಿ ವಿಷಯದ ಘಟಕವಾರು ಮಕ್ಕಳಿಂದ ಪ್ರಶ್ನೆ ತೆಗೆಸಿ ಉತ್ತರವನ್ನು ಅವರೇ ಹುಡುಕುವ ಪ್ರಯತ್ನ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಲಾಗುತ್ತಿದೆ.

ಶಾಲೆಯಲ್ಲಿ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿರುವುದಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವೈಯಕ್ತಿಕ ಕಾಳಜಿ ತೋರಿಸಿ ಕಲಿಕಾ ಮಟ್ಟ ಹೆಚ್ಚಿಸಲಾಗುತ್ತಿದೆ. 

ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಕೊಠಡಿ, ಪ್ರಯೋಗಾಲಯ, ಕುಡಿಯುವ ನೀರಿನ ವ್ಯವಸ್ಥೆ  ಇದೆ. ಕಂಪ್ಯೂಟರ್, ಕನ್ನಡ, ಸಮಾಜ ವಿಜ್ಞಾನ,  ಗಣಿತ ವಿಷಯಕ್ಕೆ ಅತಿಥಿ ಶಿಕ್ಷಕರೇ ಶಾಲೆಗೆ ಅಧಾರವಾಗಿದ್ದಾರೆ. ವಸತಿ ಶಾಲೆಯ ನಿಲಯ ಪಾಲಕರು ಇಲ್ಲದಂತಾಗಿದ್ದು ದೈಹಿಕ ಶಿಕ್ಷಕರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅನೇಕ ಸಮಸ್ಯೆಗಳ ನಡುವೆಯೂ ವಿದ್ಯಾರ್ಥಿಗಳು, ಶಿಕ್ಷಕರ ನಿರಂತರ ಪರಿಶ್ರಮದಿಂದ ಶೇ100 ಫಲಿತಾಂಶ ಬಂದಿದೆ.

ಈ ವರ್ಷದ ಶಾಲೆಯ 47 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು 25 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಒಬ್ಬ ವಿದ್ಯಾರ್ಥಿ ದ್ವೀತಿಯ ಸ್ಥಾನ ಪಡೆದಿದ್ದಾರೆ. ಶಿವರಾಜ (ಶೇ95.52), ಮಲ್ಲಮ್ಮ (93.28), ಬಸವರಾಜ ಮತ್ತು ಸಿದ್ದನಗೌಡ (92.32) ಶಾಲೆಗೆ ಕ್ರಮವಾಗಿ ಪ್ರಥಮ, ದ್ವೀತಿಯ, ತೃತೀಯ ಪಡೆದಿದ್ದಾರೆ. 

ತರಗತಿ ಮುಗಿದ ಬಳಿಕವೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ಇಡುತ್ತೇವೆ. ಶಿಕ್ಷಕರ ಪಾಲಕರ ಪ್ರೋತ್ಸಾಹ ಪ್ರೋತ್ಸಾಹದೊಂದಿಗೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು
-ಎನ್.ಎಸ್.ಜಾದವ್ ಪ್ರಾಚಾರ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹನಕುಂಟಿ
ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ಇದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಎಲ್ಲರೂ ಉತ್ತೀರ್ಣರಾಗಿದ್ದೇವೆ. ಶಾಲೆಗೆ ನಾನು ಪ್ರಥಮ ಸ್ಥಾನ ಪಡೆದಿರುವುದು ಸಂತಸವಾಗಿದೆ
- ಶಿವರಾಜ, ವಿದ್ಯಾರ್ಥಿ
ಪ್ರತಿ ವಿದ್ಯಾರ್ಥಿಗೂ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಶಿಕ್ಷಣ ನೀಡುತ್ತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣದಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಶಿಕ್ಷಕರು ಉತ್ತಮವಾಗಿ ಭೋಧನೆ ಮಾಡುತ್ತಾರೆ. ಇದರಿಂದ ಉತ್ತಮ ಫಲಿತಾಂಶ ಸಿಗಲು ಸಹಾಯವಾಯಿತು
- ಮಲ್ಲಮ್ಮ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT