ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024: ಕೊಪ್ಪಳಕ್ಕೆ ಕಳೆದ ವರ್ಷ 16, ಈ ವರ್ಷ 32ನೇ ಸ್ಥಾನ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡ ಕೊಪ್ಪಳ ಜಿಲ್ಲೆ; ಕಳವಳ ಮೂಡಿಸಿದ ಅನುತ್ತೀರ್ಣ ಪ್ರಮಾಣ
Published 9 ಮೇ 2024, 14:08 IST
Last Updated 9 ಮೇ 2024, 14:08 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದಿನ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 16ನೇ ಸ್ಥಾನ ಪಡೆದು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಗ್ರಸ್ಥಾನ ಸಂಪಾದಿಸಿದ್ದ ಕೊಪ್ಪಳ ಜಿಲ್ಲೆ ಈ ಬಾರಿ ತೀವ್ರ ಕುಸಿತ ಕಂಡಿದ್ದು 32ನೇ ಸ್ಥಾನಕ್ಕೆ ಜಾರಿದೆ.

ಇದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಆತಂಕಕ್ಕೂ ಕಾರಣವಾಗಿದೆ. ಹಿಂದಿನ ವರ್ಷ 16ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಇನ್ನಷ್ಟು ಎತ್ತರಕ್ಕೆ ಏರಬಹುದು ಎನ್ನುವ ನಿರೀಕ್ಷೆ ಇಲ್ಲಿನ ಜನರದ್ದಾಗಿತ್ತು. ಅದಕ್ಕಾಗಿ ಶಿಕ್ಷಣ ಇಲಾಖೆ ಅನೇಕ ಹೊಸ ಪ್ರಯೋಗಗಳನ್ನು ಮಾಡಿತ್ತು. ಆದರೆ, ಫಲಿತಾಂಶ ಒಂದು ಪಟ್ಟು ಕುಸಿತ ಕಂಡಿದ್ದು ಹೀಗಾದರೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಹೇಗೆ? ಎನ್ನುವ ಚರ್ಚೆ ಶುರುವಾಗಿದೆ.

ಕಳೆದ ವರ್ಷ ಜಿಲ್ಲೆಯ ಒಟ್ಟು ಫಲಿತಾಂಶ ಶೇ 90.27ರಷ್ಟು ಇತ್ತು. ಈ ಬಾರಿ ಶೇ 64.01ಕ್ಕೆ ಕುಸಿದಿದೆ. ಪರೀಕ್ಷೆ ಎದುರಿಸಿದ 22,713 ಹೊಸ ವಿದ್ಯಾರ್ಥಿಗಳ ಪೈಕಿ 14,539 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷ ಪರೀಕ್ಷೆ ಬರೆದ ಒಟ್ಟು 21,786 ವಿದ್ಯಾರ್ಥಿಗಳಲ್ಲಿ 19,667 ಜನ ಉತ್ತೀರ್ಣರಾಗಿದ್ದರು. ಬಾಲಕರ ಉತ್ತೀರ್ಣ ಪ್ರಮಾಣ ಶೇ 87.78 ಮತ್ತು ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 92.67ರಷ್ಟು ಇತ್ತು.

ಕೊಪ್ಪಳ ಹಿಂದೆ: ಜಿಲ್ಲೆಯಲ್ಲಿ ಶೈಕ್ಷಣಿಕ ತಾಲ್ಲೂಕುವಾರು ಫಲಿತಾಂಶದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು ಶೇ 55.08ರಷ್ಟು ಫಲಿತಾಂಶ ಪಡೆದಿರುವ ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕುಗಳನ್ನು ಒಳಗೊಂಡ ಗಂಗಾವತಿ ಶೈಕ್ಷಣಿಕ ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಶೇ 74.16ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಕೊಪ್ಪಳ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಯಲಬುರ್ಗಾ (ಶೇ 72.05) ಮತ್ತು ಕುಷ್ಟಗಿ (ಶೇ 56.47) ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ.

ಪರೀಕ್ಷೆ ಬರೆದಿದ್ದ ಒಟ್ಟು 11,129 ಬಾಲಕರ ಪೈಕಿ 6,165 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರ ಪ್ರಮಾಣ ಶೇ 55.40ರಷ್ಟು ಇದೆ. ಬಾಲಕಿಯರ ವಿಭಾಗದಲ್ಲಿ 11,548 ಜನ ಪರೀಕ್ಷೆ ಬರೆದಿದ್ದು, ಇದರಲ್ಲಿ 7,374ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇವರ ಪ್ರತಿಶತ ಪ್ರಮಾಣ ಶೇ 72.29ರಷ್ಟು ಇದೆ.

ಕೈಕೊಟ್ಟ ಮಕ್ಕಳ ಮನೆ ಪ್ರಯೋಗ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯಬೇಕು ಎನ್ನುವ ಕಾರಣಕ್ಕಾಗಿ ‘ಮಕ್ಕಳ ಮನೆ’ ಪ್ರಯೋಗ ನಡೆಸಿದ್ದರೂ ಅದರ ಪ್ರತಿಫಲನ ಫಲಿತಾಂಶದಲ್ಲಿ ಕಂಡು ಬಂದಿಲ್ಲ.

ಕಲಿಕೆಯಲ್ಲಿ ಹಿಂದುಳಿದ ಈ ಭಾಗದ ಪ್ರತಿ ಜಿಲ್ಲೆಗಳ ವಿದ್ಯಾರ್ಥಿಗಳನ್ನು ತರಗತಿವಾರು ಗುರುತಿಸಿ ಅವರನ್ನು ‘ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಮಕ್ಕಳು’ ಎಂದು ಹೆಸರಿಸಲಾಗಿತ್ತು. ಅವರಿಗೆ ವಿಶೇಷ ತರಗತಿ, ಗುಂಪು ಚಟುವಟಿಕೆ, ವಿದ್ಯಾರ್ಥಿಗಳ ನಡುವೆ ಪರಸ್ಪರ ಚರ್ಚೆ, ಶಾಲಾ ಸಮಯ ಮುಗಿದ ಬಳಿಕವೂ ಶಾಲಾವರಣದಲ್ಲಿ ಗುಂಪು ಕೂಡಿ ಓದಲು ವಿದ್ಯಾರ್ಥಿಗಳೇ ನೆರವಾಗುವುದು ‘ಕಲಿಕಾ ಆಸರೆ’ಯ ಪರಿಕಲ್ಪನೆ ಇದಾಗಿತ್ತು. ಇದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಯೋಜನೆಯನ್ನೂ ರೂಪಿಸಲಾಗಿತ್ತು. ಹೀಗಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಫಲಿತಾಂಶ ಸುಧಾರಣೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಮತ್ತೆ ಇದೇ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿವೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾರದರ್ಶಕವಾಗಿ ನಡೆದಿದ್ದು ನಕಲಿಗೆ ಕಿಂಚಿತ್ತೂ ಅವಕಾಶವಿರಲಿಲ್ಲ. ಮುಂದಿನ ಪ್ರಯತ್ನದಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದೆ.
ಶ್ರೀಶೈಲ ಬಿರಾದಾರ ಡಿಡಿಪಿಐ ಕೊಪ್ಪಳ

ವೆಬ್‌ ಕಾಸ್ಟಿಂಗ್‌ ಬಳಕೆ

ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಯಲು ಶಿಕ್ಷಣ ಇಲಾಖೆಯೇ ವೆಬ್‌ ಕಾಸ್ಟಿಂಗ್‌ ಬಳಕೆ ಮಾಡಿತ್ತು. ಈ ತಂತ್ರಜ್ಞಾನವನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲಾಗಿತ್ತು. ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ವಿಡಿಯೊ ದೃಶ್ಯಾವಳಿಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಡಿಡಿಪಿಐ ಕಚೇರಿಯಲ್ಲಿ ವೀಕ್ಷಿಸಬಹುದಿತ್ತು. ಎಲ್ಲಿಯಾದರೂ ನಕಲು ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚಲು ಕಚೇರಿಯಿಂದಲೇ ಸಾಧ್ಯವಿತ್ತು. ವೆಬ್‌ ಕಾಸ್ಟಿಂಗ್‌ ಕಣ್ಣು ತಪ್ಪಿಸಿ ನಕಲು ಮಾಡುವ ಪ್ರಯತ್ನ ಕೂಡ ಕುಷ್ಟಗಿ ತಾಲ್ಲೂಕಿನಲ್ಲಿ ನಡೆದಿತ್ತು.  

ನಗರ ಪ್ರದೇಶಲ್ಲಿಯೇ ಹೆಚ್ಚು ಉತ್ತೀರ್ಣ

ಜಿಲ್ಲೆಯ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗ್ರಾಮೀಣಕ್ಕಿಂತ ನಗರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಹಳ್ಳಿ ಪ್ರತಿಭೆಗಳು ಪ್ರಮಾಣವೇ ಹೆಚ್ಚಿತ್ತು. ನಗರ ಪ್ರದೇಶದಿಂದ 4593 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 3086 ಜನ ಉತ್ತೀರ್ಣರಾಗಿದ್ದಾರೆ. ಇವರ ಪ್ರಮಾಣ ಶೇ 67.198ರಷ್ಟು ಇದೆ. ಗ್ರಾಮೀಣ ಪ್ರದೇಶದಲ್ಲಿ 18120 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 11453 ಜನ ಉತ್ತೀರ್ಣರಾಗಿದ್ದಾರೆ. ಇವರ ಉತ್ತೀರ್ಣ ಪ್ರಮಾಣ ಶೇ 63.21ರಷ್ಟು ಇದೆ.

ಜಿಲ್ಲೆಗೆ ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳು

ವಿದ್ಯಾರ್ಥಿ;ಶಾಲೆ;ತಾಲ್ಲೂಕು;ಪಡೆದ ಅಂಕ ರೇವಂತಕುಮಾರ್‌ ಪ್ರಸಾದ್‌;ಮಹಾನ್‌ ಕಿಡ್ಸ್‌ ಸ್ಕೂಲ್‌;ಗಂಗಾವತಿ;621 ಪ್ರಕಾಂಕ್ಷಾ ಎಂ.ಎಚ್‌.;ಎಸ್‌ಎಫ್‌ಎಸ್‌ ಹೈಸ್ಕೂಲು;ಕೊಪ್ಪಳ;616 ತಿರುಪತಿ ವೈ. ಗುರಿಕಾರ;ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೇವೂರು;ಯಲಬುರ್ಗಾ;615 ಮಹಾಲಕ್ಷ್ಮಿ ಸಿದ್ದಯ್ಯಸ್ವಾಮಿ;ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಲಕನಮರಡಿ;ಗಂಗಾವತಿ;613 ಶರಣಬಸವ ಎಸ್‌. ಅಂಗಡಿ;ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೇವೂರು;ಯಲಬುರ್ಗಾ;612 ಸುಪ್ರಜಾ ಜಿ. ಕಾರಂತ;ಅಕ್ಷರ ಪಬ್ಲಿಕ್‌ ಶಾಲೆ;ಗಂಗಾವತಿ;612 ನಾಗೇಶ್ ಚಿ. ಕಂಚಿ;ಕೆಂಬ್ರಿಡ್ಜ್‌;ಕಾರಟಗಿ;611 ವಿಕ್ರಮ್‌ ಡಿ.ರಾಠೋಡ;ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆಣದಾಣ;ಕುಷ್ಟಗಿ;611 ನಿಖಿತ್‌ ಎನ್‌. ರಾಟಿ;ಎಸ್‌ಎಫ್‌ಎಸ್‌ ಹೈಸ್ಕೂಲು;ಕೊಪ್ಪಳ;611 ಯುವರಾಜ ಜೀರಾಳ;ದೋನೆಪೂಡಿ ಸರೋಜಿನಿದೇವಿ ಇಂಗ್ಲಿಷ್‌ ಮಾಧ್ಯಮ ಶಾಲೆ ಶ್ರೀರಾಮನಗರ;ಗಂಗಾವತಿ;611 ಫಲಿತಾಂಶದ ಅವಲೋಕನ ವರ್ಷ;ವಿದ್ಯಾರ್ಥಿಗಳು;ಉತ್ತೀರ್ಣರಾದವರು;ಶೇ 2023;21786;19667;90.87 2024;22713;14539;64.01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT