ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result | ಯಲಬುರ್ಗಾ: ತಾಲ್ಲೂಕಿನ ಮೊದಲ ಮೂರೂ ಸ್ಥಾನ ಪಡೆದ ಮೊರಾರ್ಜಿ ಶಾಲೆ

ಉಮಾಶಂಕರ ಹಿರೇಮಠ
Published 18 ಮೇ 2024, 7:23 IST
Last Updated 18 ಮೇ 2024, 7:23 IST
ಅಕ್ಷರ ಗಾತ್ರ

ಯಲಬುರ್ಗಾ: ಕಳೆದ ಐದಾರು ವರ್ಷಗಳಿಂದಲೂ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ100 ಸಾಧನೆಯ ಮೂಲಕ ಜಿಲ್ಲೆಯಲ್ಲಿ ಉತ್ತಮ ವಸತಿ ಶಾಲೆ ಎಂಬ ಹಿರಿಮೆಗೆ ಪಾತ್ರವಾಗಿರುವ ತಾಲ್ಲೂಕಿನ ಬೇವೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಸಕ್ತ ವರ್ಷದ ಸಾಧನೆಯಲ್ಲಿ ಜಿಲ್ಲೆಯ ಅಗ್ರ 5 ಕ್ರಮಾಂಕಗಳಲ್ಲಿ ಎರಡು ಸ್ಥಾನ, ತಾಲ್ಲೂಕಿಗೆ ಕ್ರಮವಾಗಿ 1ರಿಂದ 3 ಮತ್ತು 5ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡು ತಾಲ್ಲೂಕು ಹಾಗೂ ಜಿಲ್ಲೆಯ ಗಮನ ಸೆಳೆದಿದೆ.

ಕೊಠಡಿಗಳ ಕೊರತೆ, ಕಾಯಂ ಶಿಕ್ಷಕರ ಕೊರತೆ, ಲಭ್ಯವಿರುವ ಬೋಧಕರಿಗೆ ಸಮರ್ಪಕ ವಸತಿಗೃಹಗಳಿಲ್ಲದ ಸ್ಥಿತಿ, ಕ್ರೀಡಾಂಗಣವಿಲ್ಲ ಮತ್ತು ಕಂಪೌಂಡ್‌ ಇಲ್ಲ. ಹೀಗೆ ಹಲವು ಕೊರತೆಗಳ ನಡುವೆ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಮತ್ತು ಕ್ರಿಯಾತ್ಮಕ ಬೋಧನೆಗೆ ಆದ್ಯತೆ ನೀಡಿ ಸಮರ್ಪಕವಾಗಿ ಪರೀಕ್ಷೆ ಎದುರಿಸುವಂತೆ ಮಕ್ಕಳನ್ನು ತಯಾರು ಮಾಡುವುದು ಈ ಶಾಲೆಯ ವಿಶೇಷವಾಗಿದೆ.

ಶಾಲೆಯ ಪ್ರತಿಯೊಬ್ಬ ಶಿಕ್ಷಕರು ತಮ್ಮ ವಿಷಯವಾರು ಪಠ್ಯದ ಮುಕ್ತಾಯದ ಜತೆ ವಿಶೇಷ ಪರೀಕ್ಷೆ ಆಯೋಜಿಸುವುದು, ಪರಿಣಾಮಕಾರಿಯಾಗಿ ಉತ್ತರ ಬರೆಯುವ ಕೌಶಲಗಳನ್ನು ಹೇಳಿಕೊಡುವುದು, ಖುಷಿ ಮತ್ತು ಧೈರ್ಯದಿಂದಲೇ ಪರೀಕ್ಷೆ ಎದುರಿಸುವ ಕುರಿತು ತರಬೇತಿ ನೀಡುವುದು, ಆಗಾಗ ಪಾಲಕರ ಸಭೆ ಕರೆದು ಮಕ್ಕಳ ಪ್ರತಿಭೆ ಮತ್ತು ಅವರ ನಡವಳಿಕೆಯ ಬಗ್ಗೆ ಮುಕ್ತವಾಗಿ ಚರ್ಚಿಸಿ ಅವಶ್ಯಕವಿದ್ದಲ್ಲಿ ಬದಲಾವಣೆ ತರುವುದು. ಹಬ್ಬ ಹರಿದಿನಗಳಲ್ಲಿ ಊರಿಗೆ ಕಳುಹಿಸಿಕೊಡದೇ ಶಾಲೆಯಲ್ಲಿಯೇ ಎಲ್ಲ ಮಕ್ಕಳೊಂದಿಗೆ ಹಬ್ಬ ಆಚರಿಸುವ ಮೂಲಕ ಮಕ್ಕಳಲ್ಲಿ ಕಲಿತಾ ಸಾಮರ್ಥ್ಯ ಮತ್ತು ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು... ಹೀಗೆ ಶಾಲೆಯ ವೈವಿಧ್ಯಮಯ ವಾತಾವರಣದಿಂದ ರಾಜ್ಯಮಟ್ಟದ ಶ್ರೇಯಾಂಕದಲ್ಲಿ 12ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಾಚಾರ್ಯರಾದ ನಾಗಲಕ್ಷ್ಮಿ ಮಿಸ್ಕಿನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶಾಲೆಯ ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಯೋಗಸ್ಪರ್ಧೆಯಲ್ಲಿ ಸತತ ಮೂರು ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಬಹುಮಾನ, ಜಿಲ್ಲಾಮಟ್ಟದ ಕ್ರೀಡಾಕೂಟದ ಚಿಣ್ಣರ ಅಂಗಳ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಜಿಲ್ಲಾಮಟ್ಟದಲ್ಲಿ ಉತ್ತಮ ಪ್ರದರ್ಶನದ ಮೂಲಕ ಬಹುಮಾನ ಪಡೆದು ಇಲ್ಲಿಯ ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಬೆಳಗಿದ್ದಾರೆ.

ಶಾಲೆ ಪ್ರಾರಂಭಗೊಂಡು ಸುಮಾರು 15ವರ್ಷಗಳು ದಾಟಿವೆ. ಇಲ್ಲಿ ಕಲಿತು ಹೋದ ಹಳೆಯ ವಿದ್ಯಾರ್ಥಿಗಳಲ್ಲಿ ಅನೇಕರು ವೈದ್ಯರು, ಶಿಕ್ಷಕರು, ಪೊಲೀಸರು ಹಾಗೂ ವಿವಿಧ ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದ್ಯಾಮಣ್ಣ ಖುಷಿಯಿಂದಲೇ ಹೇಳಿಕೊಂಡಿದ್ದಾರ

ಶಾಲೆಯ ಎಲ್ಲ ಸಿಬ್ಬಂದಿ ಪರಿಶ್ರಮ, ವಿದ್ಯಾರ್ಥಿಗಳ ನಿರಂತರ ಪ್ರಯತ್ನ, ಪಾಲಕರ ಪ್ರೋತ್ಸಾಹದಿಂದಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣಗೊಂಡಿದೆ. ಮುಂದಿನ ಅವಧಿಯಲ್ಲಿ ರಾಜ್ಯಮಟ್ಟದಲ್ಲಿ ಅಗ್ರಸ್ಥಾನಕ್ಕೆ ಬರುವಂತೆ ಮಕ್ಕಳನ್ನು ಸಿದ್ಧಮಾಡುತ್ತೇವೆ
ನಾಗಲಕ್ಷ್ಮಿ ಮಿಸ್ಕಿನ್, ಪ್ರಾಚಾರ್ಯರು
ನಾಲ್ಕು ವಸತಿ ಶಾಲೆಗಳಲ್ಲಿ ಶೇ 100 ಸಾಧನೆ ಮಾಡಿದ್ದು ಖುಷಿಯ ಸಂಗತಿ. ಯಾವುದೇ ಕೊರತೆಯಿಲ್ಲದಂತೆ ನೋಡಿಕೊಳ್ಳುವ ಸಿಬ್ಬಂದಿ ಪರಿಶ್ರಮದಿಂದ ಬೇವೂರು ಶಾಲೆ ಮುಂಚೂಣಿಯಲ್ಲಿದೆ
ಶಿವಶಂಕರ ಕರಡಕಲ್ಲ, ತಾಲ್ಲೂಕು ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಯಲಬುರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT